ಮಕ್ಕಳ ಸುರಕ್ಷತಾ ನೀತಿಗೆ ಸಂಪುಟ ಅಸ್ತು
‘ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ’
ಬೆಂಗಳೂರು, ಎ. 20: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ‘ಮಕ್ಕಳ ಸುರಕ್ಷತಾ ನೀತಿ-2016 ಅನ್ನು ರಚಿಸಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಬುಧವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಗುರಿಯಾದ ಮಕ್ಕಳಿಗೆ ಅಗತ್ಯ ನೆರವು ಹಾಗೂ ಪರಿಹಾರ ಕಲ್ಪಿಸಲು ನೀತಿಯಲ್ಲಿ ಅವಕಾಶ ಕಲ್ಪಿಸಬೇಕು.
ಬಾಹ್ಯ ಸಮಿತಿಗಳಲ್ಲಿ ಪೊಲೀಸರು, ಪೋಷಕರು, ಮಕ್ಕಳ ಸೇರ್ಪಡೆ ಮಾಡುವುದು. ವಿಕಲಚೇತನರು ಹಾಗೂ ವಲಸೆ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಿಮ್ಹಾನ್ಸ್ ನೀಡಿರುವ ವರದಿಯನ್ನು ನೀತಿಯಲ್ಲಿ ಸೇರ್ಪಡೆ ಮಾಡಲು ಕ್ರ ಮ ಕೈಗೊಳ್ಳಲಾಗಿದೆ ಎಂದರು.
ಸುಪ್ರೀಂಗೆ ಪ್ರಮಾಣ ಪತ್ರ: ಅಕ್ರಮ ಗಣಿಗಾರಿಕೆಯಿಂದ ಹಾನಿಗೀಡಾಗಿರುವ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ರಸ್ತೆ, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.
ಅಕ್ರಮ ಗಣಿಗಾರಿಕೆಯಿಂದ ದಂಡದ ರೂಪದಲ್ಲಿ ಪ್ರಸಕ್ತ ವರ್ಷ 7ಸಾವಿರ ಕೋಟಿ ರೂ. ವಸೂಲಿ ಮಾಡಿದ್ದು, ಮುಂದಿನ ಐದು ವರ್ಷಗಳಲ್ಲಿ 15 ಸಾವಿರ ಕೋಟಿ ರೂ. ಸಂಗ್ರಹ ಆಗುವ ನಿರೀಕ್ಷೆಯಿದ್ದು, ಆ ಮೊತ್ತದಲ್ಲಿ ಮೇಲ್ಕಂಡ ಜಿಲ್ಲೆಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ ಸುಪ್ರೀಂ ಕೋರ್ಟ್ ಕೇಂದ್ರೀಯ ಉನ್ನತಾಧಿಕಾರಿ ಸಮಿತಿ (ಸಿಇಸಿ)ಗೆ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬಿಎಸ್‌ವೈ ವಿರುದ್ಧ ಮೇಲ್ಮನವಿ: ರಾಚೇನಹಳ್ಳಿ ಡಿ-ನೋಟಿಫೈ ಪ್ರಕರಣ ಸೇರಿದಂತೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ 15 ಪ್ರಕರಣಗಳ ಸಂಬಂಧ ಲೋಕಾಯುಕ್ತ ಶಿಫಾರಸಿನನ್ವಯ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಲೋಕಾಯುಕ್ತ ಶಿಫಾರಸ್ಸಿನನ್ವಯ ಗೃಹ ಇಲಾಖೆ 2016ರ ಫೆಬ್ರವರಿಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಂಡಿದೆ ಎಂದರು.