×
Ad

ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸಿ: ಉಮಾಶ್ರೀ

Update: 2016-04-20 23:25 IST

ಬೆಂಗಳೂರು, ಎ. 20: ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಬೆಳಸಲು ಪೋಷಕರು ಮುಂದಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಕರೆ ನೀಡಿದ್ದಾರೆ.
ಬುಧವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಯುವ ಬರಹಗಾರರ 2014ನೆ ಸಾಲಿನ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಬಹುಮಾನ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುಸ್ತಕಗಳನ್ನು ಓದುವ ಮೂಲಕ ಸನ್ನಡತೆ ಮತ್ತು ನೈತಿಕತೆಯನ್ನು ಬೆಳೆಸಿಕೊಳ್ಳಬಹುದು. ಹೀಗಾಗಿ ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಪೋಷಕರು ಬೆಳೆಸಬೇಕು. ಮಕ್ಕಳು ಪುಸ್ತಕಗಳನ್ನು ಓದಲು ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು ಎಂದು ಹೇಳಿದರು.
 ಆಧುನಿಕ ಕಾಲಕ್ಕೆ ತಕ್ಕಂತೆ ಕನ್ನಡ ಪುಸ್ತಕಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಕನ್ನಡ ಪುಸ್ತಕಗಳನ್ನು ಓದಲು ‘ಕಣಜ’ ಎಂಬ ವೆಬ್‌ಸೈಟ್‌ಅನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 2014ರ ಸಾಲಿನ ಯುವ ಬರಹಗಾರರ 24 ಚೊಚ್ಚಲ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಮಹದೇವಯ್ಯ, ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಶಸ್ತಿ ವಿವರ: 2014ರ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ- ಅಂಕಿತ ಪುಸ್ತಕ, ಡಾ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ಪ್ರೊ.ಬಿ.ಶೇಖ್ ಅಲಿ, ಡಾ.ಜಿ.ಪಿ.ರಾಜರಾತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಡಾ.ತೇಜಸ್ವಿ ಕಟ್ಟೀಮನಿ, ಡಾ.ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಡಾ.ಬಿ.ಟಿ.ರುದ್ರೇಶ್‌ರಿಗೆ ಪ್ರದಾನಿಸಲಾಯಿತು.
ಬಹುಮಾನ ವಿವರ: 2014ರ ಸಾಲಿನ ಕನ್ನಡ ಪುಸ್ತಕ ಸೊಗಸು ಪ್ರಥಮ ಬಹುಮಾನ ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ(ಲಡಾಯಿ ಪ್ರಕಾಶನ), ದ್ವಿತೀಯ ಬಹುಮಾನ ಬುಡ್ಡಿ ದೀಪದ ಬೆಳಕು(ಬಹುರೂಪಿ ಪ್ರಕಾಶನ), ತೃತೀಯ ಬಹುಮಾನ ಕುವೆಂಪು ಚಿತ್ರ ಸಂಪುಟ(ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ).
ಉತ್ತಮ ಮಕ್ಕಳ ಪುಸ್ತಕ ಬಹುಮಾನಕ್ಕೆ ಲೇಖಕ ಗಿರೀಶ್ ಜಕಾಪುರೆ (ಸೈಕಲ್ ಸವಾರಿ) ಭಾಜನರಾದರು. ಮುಖಪುಟ ಚಿತ್ರ ವಿನ್ಯಾಸದ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕಲಾವಿದ ಮುರಳೀಧರ ವಿ.ರಾಥೋಡ್(ಮರೆತ ಭಾರತ), ದ್ವಿತೀಯ ಬಹುಮಾನವನ್ನು ಕಲಾವಿದ ರಘು ಅಪಾರ ಹಾಗೂ ಸುರೇಖಾ(ಹುದುಗಲಾರದ ದುಃಖ)ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News