ಅರ್ಜಿ ವಿಚಾರಣೆ ಎ.26ಕ್ಕೆ ಮುಂದೂಡಿಕೆ

Update: 2016-04-20 17:59 GMT

ಬೆಂಗಳೂರು, ಎ.20: ಭ್ರಷ್ಟಾಚಾರ ಪ್ರಕರಣಗಳ ಸ್ವತಂತ್ರ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎ.26ಕ್ಕೆ ಮುಂದೂಡಿತು.
ವಕೀಲ ಚಿದಾನಂದ ಅರಸ್ ಮತ್ತು ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ರಾಜ್ಯ ಅಡ್ವೊಕೇಟ್ ಜನರಲ್ ಮಧುಸೂದನ ನಾಯ್ಕ ಹಾಜರಾಗಿ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ನಾನು ಈ ಪ್ರಕರಣದ ಕುರಿತು ಆಳವಾಗಿ ಅಧ್ಯಯನ ಮಾಡಬೇಕಿದೆ. ಹೀಗಾಗಿ ಇಂದು ವಿಚಾರಣೆ ನಡೆಸಲಾಗದು. ಮೇಲಾಗಿ ಎಪ್ರಿಲ್ 21ರಿಂದ 25ರವರೆಗೆ ಕಾರ್ಯನಿಮಿತ್ತ ಹೊಸದಿಲ್ಲಿಗೆ ತೆರಳುತ್ತಿರುವುದರಿಂದ ಅರ್ಜಿ ವಿಚಾರಣೆಯನ್ನು 26ಕ್ಕೆ ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ನಂತರ ಅರ್ಜಿ ವಿಚಾರಣೆಯನ್ನು ಎಪ್ರಿಲ್ 26ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News