ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಜಿತ್ ದೋವಲ್ ಪಾಠ ಮಾಡುವುದು ಯಾಕೆ ?

Update: 2016-04-21 10:59 GMT

ರಾಷ್ಟ್ರೀಯ ಭದ್ರತೆಯು ಪಕ್ಷಾತೀತ ವಿಷಯವಾಗಿರಬೇಕು ಹಾಗೂ ಅದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದೆಂದು ಹೇಳಿದ ಎನ್‌ಎಸ್‌ಎ ಅಜಿತ್ ದೋವಲ್ ಸುಪ್ರೀಂಕೋರ್ಟ್ ನ್ಯಾಯಾಧೀಶರು ನೀಡಿದ ಹೇಳಿಕೆಯು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಹದ್ದಾಗಿದೆ ಎಂದರು.

ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ಅಜಿತ್ ದೋವಲ್ ಇತ್ತೀಚೆಗೆ ನೀಡಿದ ವಿವರಣೆಯು ಅತ್ಯಂತ ಆಘಾತಕಾರಿಯಾಗಿತ್ತು ಹಾಗೂ ವಿಚಲಿತಗೊಳಿಸುವಂತಿತ್ತು. ರಾಷ್ಟ್ರೀಯ ಭದ್ರತೆಯು ಪಕ್ಷಾತೀತ ವಿಷಯವಾಗಿರಬೇಕು. ಅದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದೆಂಬ ಧೋವಲ್ ಹೇಳಿಕೆಯು ಸಂಪೂರ್ಣ ತಪ್ಪಾದುದಾಗಿದೆ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗಳೆರಡೂ, ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ವಿದೇಶಿ ಹಾಗೂ ದೇಶೀಯ ನೀತಿಗಳನ್ನು ಅವಲಂಭಿಸಿರುತ್ತದೆ. ವಿವಿಧ ರಾಜಕೀಯ ಶಕ್ತಿಗಳು ಹಾಗೂ ನಾಗರಿಕ ಸಂಘಟನೆಗಳು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ತೀವ್ರವಾದ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ರಾಷ್ಟ್ರೀಯ ಭದ್ರತೆ ಹಾಗೂ ಮಾನವಹಕ್ಕುಗಳ ನಡುವಣ ತಿಕ್ಕಾಟವು ಪ್ರಸಕ್ತ ಸನ್ನಿವೇಶದ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದೆ. ಕಟ್ಟಾ ರಾಷ್ಟ್ರೀಯವಾದಿಗಳು ಹಾಗೂ ಮಾನವಹಕ್ಕುಗಳ ಕಾರ್ಯಕರ್ತರು ರಾಷ್ಟ್ರೀಯ ಭದ್ರತೆ ಹಾಗೂ ಮಾನವಹಕ್ಕುಗಳ ಬೇಡಿಕೆಗಳ ನಡುವೆ ರೇಖೆಯೊಂದನ್ನು ಎಳೆಯುವ ವಿಷಯದಲ್ಲಿ ಪ್ರಬಲವಾದ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ. ಹೀಗಿರುವಾಗ ರಾಷ್ಟ್ರೀಯ ಭದ್ರತೆಯೆಂಬುದು ರಾಜಕೀಯೇತರ ಅಥವಾ ಪಕ್ಷೇತರ ವಿಷಯವಾಗಿರಲು ಹೇಗೆ ತಾನೇ ಸಾಧ್ಯ?.

ಕೆಲವು ನ್ಯಾಯಾಧೀಶರು ರಾಷ್ಟ್ರೀಯ ಭದ್ರತೆಯ ವಿಷಯದ ಬಗ್ಗೆ ಅತ್ಯಾಸಕ್ತಿಯನ್ನು ಹೊಂದಿರುವುದನ್ನು ಇತ್ತೀಚಿನ ಕೆಲವು ತೀರ್ಪುಗಳು ತೋರಿಸಿಕೊಟ್ಟಿವೆ. ಈ ಕಾನೂನುಗಳು ಮಾನವಹಕ್ಕುಗಳ ಸಂಪೂರ್ಣ ಉಲ್ಲಂಘನೆಯೆಂದು ಅವರಿಗೆ ಚೆನ್ನಾಗಿ ತಿಳಿದಿದೆಯಾದರೂ ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ.ಅಫ್ಧಲ್ ಗುರುವಿಗೆ ವಿವಾದಾತ್ಮಕ ಗಲ್ಲು ಶಿಕ್ಷೆ ಪ್ರಕರಣವು ಇದಕ್ಕೊಂದು ಅತ್ಯುತ್ಕೃಷ್ಟ ಉದಾಹರಣೆಯಾಗಿದೆ.

ರಾಷ್ಟ್ರೀಯ ಭದ್ರತೆಯ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ರಾಷ್ಟ್ರೀಯ ಭದ್ರತಾ ಅಧಿಕಾರಿಯಿಂದ ಸರ್ವಪಕ್ಷೀಯ ಹಾಗೂ ಪಕ್ಷಾತೀತ ವಿವರಣೆಯನ್ನು ಕೇಳುವ ಅಗತ್ಯವಾದರೂ ಏನಿದೆ?. ಒಂದು ವೇಳೆ ಅದು ಸರಿಯೆಂದಾದರೆ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ತಾರತಮ್ಯಕ್ಕೊಳಗಾದ ಮುಖವಿಲ್ಲದ ಹಾಗೂ ಧ್ವನಿಯಿಲ್ಲದ ಸಾರ್ವಜನಿಕರ ಸಂವಿಧಾನದ ಹಕ್ಕುಗಳನ್ನು ಸಾಮಾಜಿಕ ಕಾರ್ಯಕರ್ತರು ಹಾಗೂ ಮಾನವಹಕ್ಕುಗಳ ಸಮರ್ಥಕರ ವಾದಗಳನ್ನು ಅವರು ಯಾಕೆ ಅಲಿಸುವುದಿಲ್ಲ?. ಅದೇ ರೀತಿ ನಿರ್ವಸಿತ ಆದಿವಾಸಿಗಳ, ಶೋಷಣೆಗೊಳಗಾದ ದಲಿತರ ಹಾಗೂ ಭಯಭೀತರಾದ ಅಲ್ಪಸಂಖ್ಯಾತರ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಮತ್ತು ಕಿರುಕುಳಕ್ಕೊಳಗಾದ ಮಕ್ಕಳ ಅಹವಾಲುಗಳಿಗೆ ಯಾಕೆ ಕಿವಿಗೊಡುವುದಿಲ್ಲ?. ನ್ಯಾಯಾಧೀಶರು ವಿಶೇಷವಾಗಿ ಜಗತ್ತಿನ ಈ ನೊಂದಿತರ ನೋವು ಹಾಗೂ ಬವಣೆಗಳನ್ನು ಅಲಿಸುವ ಹಾಗೂ ಅರಿಯುವ ಅಗತ್ಯವಿದೆ.

ರಾಷ್ಟ್ರೀಯ ಭದ್ರತೆಯೆಂಬುದು ಕೇವಲ ಆಡಳಿತಾರೂಢ ಗಣ್ಯರ ಭದ್ರತೆ ಮಾತ್ರವೇ ಅಲ್ಲ, ಈ ದೇಶದ ಜನತೆಯ ಸುರಕ್ಷತೆ ಕೂಡಾ ಆಗಿದೆ. ಭದ್ರತೆಯ ವಿಷಯದಲ್ಲಿ ಸರಕಾರವನ್ನು ಯಾವಾಗಲೂ ನಂಬಲು ಸಾಧ್ಯವಿಲ್ಲ. ಹಲವಾರು ಸಂದರ್ಭಗಳಲ್ಲಿ ಪಕ್ಷ ಹಾಗೂ ರಾಜಕೀಯ ಕಾರಣಗಳಿಂದಾಗಿ ಗಡಿ ಹಾಗೂ ಅಂತರಿಕ ಭದ್ರತೆಯ ವಿವಾದಗಳು ಹುಟ್ಟಿಕೊಳ್ಳುತ್ತವೆ. ತಥಾಕಥಿತ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್‌ನ ಹೋರಾಟದಲ್ಲಿ ಕೈಜೋಡಿಸುವ ಭಾರತದ ನಿರ್ಧಾರವನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಜಮ್ಮುಕಾಶ್ಮೀರ ಹಾಗೂ ಈಶಾನ್ಯಭಾರತದ ಬಿಕ್ಕಟ್ಟುಗಳು, ಸ್ಥಳೀಯ ಜನತೆ ದೂರವಾಗಲು ಕಾರಣವಾದ ಹಿಂದಿನ ಹಾಗೂ ಹಾಲಿ ಸರಕಾರಗಳ ಜನವಿರೋಧಿ ನೀತಿಗಳ ಪರಿಣಾಮವಾಗಿದೆ. ಲಕ್ಷಾಂತರ ಆದಿವಾಸಿಗಳ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಡೆಗಣಿಸಿದ್ದರಿಂದಲೇ ನಕ್ಸಲ್ ಸಮಸ್ಯೆ ಹೆಡೆಯೆತ್ತಿದೆ.

ಅಮೆರಿಕದ ಮೇಲೆ ನಡೆದ 9/11ರ ಭಯೋತ್ಪಾದಕ, ದಾಳಿ ಘಟನೆಯ ಬಳಿಕ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರಜಾತಾಂತ್ರಿಕ ಹಕ್ಕುಗಳನ್ನು ಹಾಗೂ ಪೌರ ಸ್ವಾತಂತ್ರಗಳನ್ನು ಹತ್ತಿಕ್ಕುವುದು ಸಾಮಾನ್ಯವಾಗಿಬಿಟ್ಟಿದೆ. ಮಾನವಹಕ್ಕುಗಳು ನಿಜಕ್ಕೂ ರಾಷ್ಟ್ರೀಯ ಭದ್ರತೆಯ ಮುಂದೆ ಅತಾರ್ಕಿಕವಾಗಿದೆಯೇ?. ಜನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಕಡೆಗಣಿಸುವ ಮೂಲಕ ನಮ್ಮ ದೇಶವನ್ನು ನಿಜಕ್ಕೂ ಭದ್ರವಾಗಿಡಲು ಸಾಧ್ಯವೇ?. ಸತ್ಯವೇನೆಂದರೆ, ಪ್ರಜಾತಾಂತ್ರಿಕ ಹಕ್ಕುಗಳನ್ನು ಅನುಭವಿಸುವ ಮುಕ್ತ ಸ್ವಾತಂತ್ರದ ಹಾಗೂ ಸಂತೃಪ್ತ ಜನತೆಯೇ ದೇಶದ ಭದ್ರತೆಗೆ ನೀಡಬಹುದಾದ ಅತ್ಯಂತ ಖಚಿತವಾದ ಖಾತರಿಯಾಗಿದೆ.

ಇನ್ನೊಂದೆಡೆ,ನಾಗರಿಕ ಹಕ್ಕುಗಳ ದಮನ, ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮೂಲೆಗುಂಪುಗೊಳಿಸುವುದು, ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸೌಹಾರ್ದತೆಯು ದೇಶಕ್ಕೆ ಮಾತ್ರವಲ್ಲ ಇಡೀ ಜಾಗತಿಕ ಭದ್ರತೆಗೆ ಎದುರಾಗುವ ಗಂಭೀರ ಬೆದರಿಕೆಗಳಾಗಿವೆ. ಮಾನವಹಕ್ಕುಗಳ ಕುರಿತು ಸಾರ್ವತ್ರಿಕ ಘೋಷಣೆ (1948) ಹಾಗೂ ನಮ್ಮ ಸಂವಿಧಾನ ಕೂಡಾ ಈ ಅಂಶವನ್ನೇ ಉಲ್ಲೇಖಿಸಿದೆ. ಹೀಗಾಗಿ ನ್ಯಾಯಾಧೀಶರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಕೇವಲ ಒಂದು ಪಕ್ಷದ ಅಭಿಪ್ರಾಯಗಳನ್ನು ಮಾತ್ರವೇ ಅರಿಯುವುದು ನ್ಯಾಯಸಮ್ಮತವೆನಿಸದು. ಅವರು ನಾಗರಿಕ ಹಕ್ಕುಗಳ ಹೋರಾಟಗಾರರ ವಿವರಣೆಗಳನ್ನು ಕೂಡಾ ಆಲಿಸಬೇಕಾಗಿದೆ.

Writer - ಗಿರೀಶ್ ಪಟೇಲ್

contributor

Editor - ಗಿರೀಶ್ ಪಟೇಲ್

contributor

Similar News