ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆಗೆ ಅಡ್ಡಿ ಆತಂಕ
ಮಡಿಕೇರಿ,ಎ.21: ನಗರದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣಗೊಳ್ಳುವುದು ಈ ವರ್ಷವೂ ಅಸಾಧ್ಯ ಎನ್ನುವ ಮುನ್ಸೂ ಚನೆಗಳು ದೊರೆತ್ತಿದೆ. ನಗರಸಭೆಯ ಈ ಹಿಂದಿನ ನಿರ್ಣಯದಂತೆ 5 ಕೋಟಿ ರೂ.ಯೋಜನೆಗೆ ಸರಕಾರ ಸುಮಾರು 15 ದಿನಗಳ ಹಿಂದೆ 2.50 ಕೋಟಿ ರೂ.ವನ್ನು ನಗರಸಭೆಗೆ ಬಿಡುಗಡೆ ಮಾಡಿದೆ. ಆದರೆ ನಗರಸಭಾಧ್ಯಕ್ಷರು ಹಾಗೂ ಕೆಲವು ಸದಸ್ಯರು ಯೋಜನೆಯನ್ನು ಖಾಸಗಿಯವರಿಗೆ ನೀಡಬೇಕೆನ್ನುವ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿರುವ ಕಾರಣ ಬಿಡುಗಡೆಯಾಗಿರುವ ಅನುದಾನವನ್ನು ವಿನಿಯೋಗಿಸಲಾಗದ ಪರಿಸ್ಥಿತಿ ಎದುರಾಗಿದೆ.
ನಗರದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣವೊಂದು ನಿರ್ಮಾಣವಾಗುತ್ತದೆ ಎನ್ನುವ ಸಾರ್ವಜನಿಕರ ಕನಸು ಕಳೆದ ಅನೇಕ ವರ್ಷಗಳಿಂದ ನನಸಾಗದೆ ಉಳಿದಿದೆ. ನಗರಸಭೆಯಲ್ಲಿರುವ ಕೆಲವು ಜನಪ್ರತಿನಿಧಿಗಳು ಸ್ವಹಿತಾಸಕ್ತಿಗಾಗಿ ಯೋಜನೆಯನ್ನು ಖಾಸಗಿಯವರಿಗೆ ನೀಡಬೇಕು ಅಥವಾ ಸರಕಾರವೇ ನಡೆಸಬೇಕು ಎನ್ನುವ ಹಗ್ಗಜಗ್ಗಾಟದಲ್ಲಿ ತೊಡಗಿ ಗೊಂದಲವನ್ನು ಸೃಷ್ಟಿಸುವ ಮೂಲಕ ಯೋಜನೆ ಸಾಕಾರಗೊಳ್ಳದಂತೆ ಪರೋಕ್ಷವಾಗಿ ತಡೆಯೊಡ್ಡುತ್ತಿರುವ ಬೆಳವಣಿಗೆ ಕಂಡು ಬಂದಿದೆ. ರೂ.2.50 ಕೋಟಿ ಬಿಡುಗಡೆ
ಈ ಹಿಂದಿನ ನಗರಸಭಾ ಸಾಮಾನ್ಯ ಸಭೆಯ ನಿರ್ಣಯದಂತೆ ಮತ್ತು ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಚಿಂತನೆಯಂತೆ ಆರಂಭದಲ್ಲಿ ತಯಾರಿಸಲಾಗಿದ್ದ 5 ಕೋಟಿ ರೂ. ಯೋಜನೆಗೆ ಅನುಮೋದನೆ ದೊರೆತು 15 ದಿನಗಳ ಹಿಂದೆ 2.50 ಕೋಟಿ ರೂ. ನಗರಸಭೆಗೆ ಬಿಡುಗಡೆಯಾಗಿದೆ. ನಗರಾಭಿವೃದ್ಧಿ ಇಲಾಖೆ ಅಧೀನದ ಮೂಲಕ ಹಣ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಿ ವರದಿ ನೀಡುವಂತೆ ನಗರಸಭೆಗೆ ಸೂಚನೆ ನೀಡಲಾಗಿದೆ.
ಆದರೆ ನಗರಸಭಾಧ್ಯಕ್ಷರೂ ಸೇರಿದಂತೆ ಆಡಳಿತ ಪಕ್ಷದ ಕೆಲವು ಸದಸ್ಯರು ಖಾಸಗಿಯವರಿಗೆ ಬಸ್ ನಿಲ್ದಾಣದ ಯೋಜನೆಯನ್ನು ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, ಸರಕಾರಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೃಷಿ ಸಂಶೋಧನಾ ಕೇಂದ್ರ 3 ಎಕರೆ ಜಾಗವನ್ನು ಕೇವಲ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆಂದು ಮಾತ್ರ ನೀಡಿದ್ದು, ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದೆಂದು ಕರಾರಿನಲ್ಲಿ ಉಲ್ಲೇಖಿಸ ಲಾಗಿದೆ. ಕೇವಲ ವಾಣಿಜ್ಯ ಉದ್ದೇಶದ ಕಟ್ಟಡಗಳೇ ತಲೆ ಎತ್ತಿದರೆ ಕೃಷಿ ಸಂಶೋಧನಾ ಕೇಂದ್ರ ಕರಾರು ಉಲ್ಲಂಘನೆಯಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿದೆ. ಉದ್ದೇಶಿತ ಯೋಜನೆ ಅನೇಕ ವರ್ಷ ಕಳೆದರೂ ಆರಂಭಗೊಳ್ಳದೇ ಇರುವುದರಿಂದ ಭೂಮಿಯನ್ನು ವಾಪಸ್ ಪಡೆಯುವ ಕುರಿತು ಮುನ್ಸೂಚನೆಯನ್ನು ಕೃಷಿ ಸಂಶೋಧನಾ ಕೇಂದ್ರ ಈ ಹಿಂದೆ ನೀಡಿತ್ತು. ಆದರೂ ಖಾಸಗಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಕಾಳಜಿ ತೋರದ ನಗರಸಭೆ ಇದೀಗ ಮತ್ತೆ ತಕರಾರುಗಳ ಮೂಲಕ ಯೋಜನೆಯನ್ನು ಮತ್ತಷ್ಟು ವಿಳಂಬ ಮಾಡುತ್ತಿದೆ.ಹಿಂದಿನ ನಿರ್ಣಯದಂತೆ 5 ಕೋಟಿ ರೂ. ಯೋಜನೆಯನ್ನು ಕೈಗೆತ್ತಿಕೊಂಡರೆ ಬಸ್ ನಿಲ್ದಾಣ, ಸುಸಜ್ಜಿತ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹೊಟೇಲ್ ಸೇರಿದಂತೆ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿದೆ. ಹೊಂದಾಣಿಕೆಯ ಕೊರತೆ:
ಈ
ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಇರುವುದು ಎದ್ದು ಕಾಣುತ್ತಿದ್ದು, ಇಬ್ಬರ ಜಗಳದಲ್ಲಿ ಮಡಿಕೇರಿ ಜನ ಬಡವಾಗುತ್ತಿರುವುದು ಗಮನಾರ್ಹ. ದಿನದಿಂದ ದಿನಕ್ಕೆ ನಗರಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗುತ್ತಿದ್ದು, ವಾಹನ ದಟ್ಟಣೆ ಮಿತಿಮೀರುತ್ತಿದೆ. ಖಾಸಗಿ ಬಸ್ ನಿಲ್ದಾಣವನ್ನು ಶೀಘ್ರ ಸ್ಥಳಾಂತರಗೊಳಿಸುವ ಮೂಲಕ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವುದು ಸಾರ್ವಜನಿಕರ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಅಗತ್ಯವಾಗಿದೆ.