×
Ad

ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಪ್ರಮುಖ

Update: 2016-04-21 21:56 IST

ಸಾಗರ,ಎ.21: ಗ್ರಾಮೀಣ ಪ್ರದೇಶಗಳ ಸಮಗ್ರ ಆರ್ಥಿಕ ಅಭಿವೃದ್ಧ್ದಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ. ಸಹಕಾರಿ ಸಂಘಗಳ ಆಡಳಿತ ಮಂಡಳಿ ಸಹ ಬದಲಾವಣೆಗೆ ತಕ್ಕಂತೆ ಸದಸ್ಯರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ತಾಲೂಕಿನ ಶಿರವಂತೆಯಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಿರವಂತೆ ಹೋರಾಟದ ಭೂಮಿ. ಇಲ್ಲಿನ ಸಹಕಾರಿ ಸಂಸ್ಥೆಯೊಂದು ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಸಂಸ್ಥೆಗಳಲ್ಲಿ ಸದಸ್ಯರಾಗಿರುವವರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಬದಲಾವಣೆಯ ಕಾಲಘಟ್ಟದಲ್ಲಿ ನಾವಿದ್ದು, ಅದಕ್ಕೆ ಹೆದರಿಕೊಂಡು ಓಡಿ ಹೋಗದೆ, ಮೈಯೊಡ್ಡಿ ನಿಂತು ಸವಾಲು ಸ್ವೀಕರಿಸಿ, ಯಶಸ್ಸಿನ ಪಥದತ್ತ ಸಾಗುವ ಚಿಂತನೆ ನಡೆಸಬೇಕು ಎಂದರು. ಸಹಕಾರಿ ಸಂಘಗಳಲ್ಲಿ ಸದಸ್ಯರಾಗು ವವರಿಗೆ ಭೂಮಿ ಇರಬೇಕು ಎನ್ನುವ ಕಡ್ಡಾಯ ನೀತಿ ಇಲ್ಲ. ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಬಿಪಿಎಲ್ ಕಾರ್ಡ್ ಹೊಂದಿದವರನ್ನು ಸಹ ಸಹಕಾರಿ ಸಂಘದ ಸದಸ್ಯರನ್ನಾಗಿ ನೋಂದಾವಣೆ ಮಾಡಿಕೊಳ್ಳುವ ಕಾಯ್ದೆ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಷೇರು ಶುಲ್ಕವನ್ನು ಸೊಸೈಟಿಗಳೆ ಪಾವತಿ ಮಾಡಬೇಕು. ಬಿಪಿಎಲ್ ಕಾರ್ಡ್‌ದಾರರ ಬಳಿ ಷೇರು ಪಡೆಯಲು ಹಣ ಇಲ್ಲದೆ ಹೋದಲ್ಲಿ ಸಹಕಾರಿ ಸಂಘಗಳು ನಗದು ಸಾಲವನ್ನು ನೀಡಿ ಷೇರುದಾರರನ್ನಾಗಿ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಸಂಸ್ಥೆಯ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಮಧು ಬಂಗಾರಪ್ಪ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಅನೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹಮಟ್ಟ ಕುಸಿದಿದೆ. ರೈತರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆೆ. ಇಂತಹ ಹೊತ್ತಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡುವ ಮೂಲಕ ಅವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಸ್ವಸಹಾಯ ಗುಂಪುಗಳಿಗೆ ಶತಮಾನೋತ್ಸವ ನೆನಪಿನ ಕಾಣಿಕೆಯನ್ನು ವಿತರಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ  ರು. ಸಂಘದ ಅಧ್ಯಕ್ಷ ಕತ್ಲೆ ಗಣಪತಿ ಬಿ.ಕೆ. ಬರದವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಲ್.ಬಿ.ರಾಮಪ್ಪ, ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ರಘುಪತಿ, ಎಚ್.ಕೆ.ವೆಂಕಟೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ, ಸಹಕಾರಿ ಸಂಘಗಳ ಉಪ ನಿಬಂಧಕ ಜಯಪ್ಪಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News