×
Ad

ಬರ ಪರಿಹಾರ ನೀಡುವಲ್ಲಿ ಸರಕಾರಗಳು ವಿಫಲ

Update: 2016-04-21 22:00 IST

ಸೊರಬ, ಎ.21: ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಬರ ಪರಿಹಾರ ನೀಡುವಲ್ಲಿ ಒಂದೆಡೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಾರತಮ್ಯ ಎಸಗುತ್ತಿದ್ದರೆ, ಮತ್ತೊಂದೆಡೆ ಇದರ ಪರಿವೇ ಇಲ್ಲದ ಹಾಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ ಎಂದು ಶಾಸಕ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.

ತಾಲೂಕಿನ ತುಯಿಲುಕೊಪ್ಪ ಗ್ರಾಮದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಒಡ್ಡಿನಕೆರೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಆದರೆ, ದೇಶದಲ್ಲೇ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದ ಬರ ಪ್ರದೇಶವೆಂದು ಕರ್ನಾಟಕವನ್ನು ಗುರುತಿಸಲಾಗಿದ್ದು, ರಾಜ್ಯ ಸರಕಾರ ಬರ ಪರಿಹಾರಕ್ಕೆ 3,600 ಕೋಟಿ ರೂ. ಮನವಿ ಸಲ್ಲಿಸಿದ್ದರೆ ಕೇವಲ 1,600 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾದ ಬಿ.ಎಸ್.ಯಡಿಯೂರಪ್ಪರವರು ಕೂಡ ರಾಜ್ಯಕ್ಕೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ತಾಲೂಕಿನಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 4 ಕೊಳವೆಬಾವಿ ಕೊರೆಯುವ ಯಂತ್ರಗಳು ನಿರಂತರವಾಗಿ ತಾಲೂಕಿನ ಪ್ರತೀ ಗ್ರಾಮಗಳಿಗೂ ತೆರಳಿ ಅಗತ್ಯವಿರುವ ಗ್ರಾಮಗಳಲ್ಲಿ ಕೊಳವೆಬಾವಿ ತೆಗೆದು ನೀರು ಒದಗಿಸುತ್ತಿವೆ. ಇನ್ನು ತುರ್ತಾಗಿ ಅವಶ್ಯವಿರುವ ಗ್ರಾಮಗಳಿಗೆ ಹ್ಯಾಂಡ್ ಬೋರ್ ಮೂಲಕ ಕುಡಿಯುವ ನೀರು ಒದಗಿಸಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸುನೀತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ.ಕೆ. ಮಹೇಶ್, ಪ್ರಮುಖರಾದ ಸದಾನಂದ ಗೌಡ, ಸಂಜೀವ ಲಕ್ಕವಳ್ಳಿ, ಎಂ.ಡಿ. ಶೇಖರ್, ಬಸವಲಿಂಗಪ್ಪ, ಅಣ್ಣಪ್ಪ, ನೀಲಮ್ಮ, ಮುತ್ತಮ್ಮ, ಶಂಕ್ರಪ್ಪಮುಳ್ಳಕೇರ್, ಹಬೀಬ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News