×
Ad

ವಿವಿಧ ಸಂಘಟನೆಗಳಿಂದ ಮುಂದುವರಿದ ಪ್ರತಿಭಟನೆ

Update: 2016-04-21 22:01 IST

ಶಿವಮೊಗ್ಗ, ಎ.21: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಗುರುವಾರ ಶಿವಮೊಗ್ಗ ನಗರದಲ್ಲಿ ರಾಜ್ಯ ರೈತ ಸಂಘ, ಪತ್ರಕರ್ತರ ಸಂಘ, ಕನ್ನಡಿಗರ ಜನಪರ ರಕ್ಷಣಾ ವೇದಿಕೆಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಪತ್ರ ಅರ್ಪಿಸಿದವು. ನಿರಂತರ ಸಂಘಟನೆಯು ಮಹಾನಗರ ಪಾಲಿಕೆ ಮುಂಭಾಗ ಧರಣಿ ನಡೆಸಿ ಆಯುಕ್ತೆಗೆ ಮನವಿ ಪತ್ರ ಸಲ್ಲಿಸಿತು. ರಾಜ್ಯ ರೈತ ಸಂಘ

: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೃಷಿಕರ ಸಂಕಷ್ಟಗಳ ಮತ್ತು ಬರಗಾಲದ ನಿವಾರಣೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೀವ್ರ ನಿರ್ಲಕ್ಷ್ಯವಹಿಸಿವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೃಷಿ ಮತ್ತು ಕೃಷಿಕರನ್ನು ರಕ್ಷಿಸುವ ದೂರದೃಷ್ಟಿಯ ಆಲೋಚನೆ ಮಾಡಿಲ್ಲ ಎಂದು ಸಂಘಟನೆ ದೂರಿದೆ. ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಡಿಕೆ ಆಮದು ನಿಲ್ಲಿಸಬೇಕು. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಲೆ ಬಾಳುವ ಮರಗಳನ್ನು ಕಟಾವು ಮಾಡಲು ಪರವಾನಿಗೆ ನೀಡುವ ಕ್ರಮವನ್ನು ಸರಳಗೊಳಿಸಬೇಕು. ಬೆಲೆ ಬಾಳುವ ಮರಗಳನ್ನು ಬೆಳೆಸುವುದು ಮತ್ತು ಕಟಾವು ಮಾಡುವುದು ರೈತರ ಹಕ್ಕು ಆಗಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ರೈತರಿಗೆ ಕನಿಷ್ಠ 40 ರೂ. ಪ್ರತಿ ಲೀಟರ್ ಹಾಲಿಗೆ ದರ ನಿಗದಿ ಮಾಡಬೇಕು. ಸಕ್ಕರೆ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿರುವುದರಿಂದ ರಾಜ್ಯ ಸರಕಾರವು ಈ ಹಿಂದೆ ನೀಡಿದಂತೆ ಪ್ರಸಕ್ತ ಸಾಲಿನ ಕಬ್ಬಿಗೆ ಟನ್‌ವೊಂದಕ್ಕೆ 2,650 ರೂ. ಬೆಲೆ ನಿಗದಿಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂ ಡರಾದ ಕೆ.ಟಿ.ಗಂಗಾಧರ್, ಜಿ.ಉಮಾ ಪತಿಯಪ್ಪ, ಯಶವಂತರಾವ್ ಘೋರ್ಪಡೆ, ಓಟೂರು ಶಿವಪ್ಪ, ಎಂ.ರಂಗಪ್ಪ, ಕೆ.ಎಸ್.ಪುಟ್ಟಪ್ಪ, ಸೇನಾಪತಿಗೌಡ, ಡಿ.ವಿ.ವೀರೇಶ್ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತರ ಸಂಘ

: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯ ವೇಳೆ ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಭಟನೆಯ ವರದಿಗೆ ತೆರಳಿದ್ದ ವಿದ್ಯುನ್ಮಾನ ವರದಿಗಾರರು ಹಾಗೂ ಛಾಯಾಗ್ರಾಹಕರ ಮೇಲೆ ಪೊಲೀಸರು ಅಮಾನುಷ ಹಲ್ಲೆ ನಡೆಸಿದ್ದಾರೆ. ಗಲಭೆಯಂತಹ ಸೂಕ್ಷ್ಮ ಸಂದಭರ್ವನ್ನು ಯಥಾವತ್ತಾಗಿ ವರದಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯನಿರತ ಛಾಯಾಗ್ರಾಹಕರ ಮೇಲೆ ಪೊಲೀ ಸರು ಅಮಾನುಷವಾಗಿ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೊ

ೀಶ ವ್ಯಕ್ತಪಡಿಸಿದ ಅವರು, ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಪತ್ರಿಕಾ, ವಿದ್ಯುನ್ಮಾನ ವರದಿಗಾರರು, ಛಾಯಾಗ್ರಾಹಕರು ವಸ್ತುನಿಷ್ಟವಾಗಿ ಕರ್ತವ್ಯ ನಿರ್ವಹಿಸಲು ಪೂರ್ಣವಾಗಿ ಸಹಕಾರ ನೀಡಬೇಕು ಎಂದು ಪತ್ರಕರ್ತರು ಆಗ್ರಹಿಸಿದ್ದಾರೆ. ಕನ್ನಡಿಗರ ರಕ್ಷಣಾ ವೇದಿಕೆ

: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಕನ್ನಡಿಗರ ಜನಪರ ರಕ್ಷಣಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಮೂಲಕ ಲೋಕಾಯುಕ್ತ ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಸರಕಾರದ ಈ ಕ್ರಮ ಜನ ವಿರೋಧಿ ಯಾದುದಾಗಿದೆ ಎಂದು ಸಂಟನೆ ಆರೋಪಿಸಿದೆ. ರಾಜ್ಯ ಸರಕಾರ ದಕ್ಷ ನ್ಯಾಯಮೂರ್ತಿ ನೇಮಕ ಮಾಡಿ ಭ್ರಷ್ಟಾಚಾರದ ವಿರುದ್ಧದ ಲೋಕಾಯುಕ್ತ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿತ್ತು. ಆದರೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಎಸಿಬಿ ರಚನೆ ಮಾಡಿದೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪಿ ಕೊಳ್ಳಲು ಸಾಧ್ಯವಿಲ್ಲ ಎಂದು ಸಂಘಟನೆ ತಿಳಿಸಿದೆ. ಪ್ರತಿಭಟನೆಯಲ್ಲಿ ಜಾವಳ್ಳಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು. ನಿರಂತರ ಸಂಘಟನೆ

: ಅಲೆಮಾರಿ ಕುಟುಂಬಗಳಿಗೆ ಆಶ್ರಯ ಮನೆ ಕಲ್ಪಿಸಬೇಕು ಎಂದು ನಿರಂತರ ಸಂಟನೆ ಆಗ್ರಹಿಸಿದೆ. ನಗರದ ಸಹ್ಯಾದ್ರಿ ಕಾಲೇಜಿನ ಸಮೀಪ ಬೈಪಾಸ್ ರಸ್ತೆ ಪಕ್ಕದಲ್ಲಿ ಕೆಲವು ಅಲೆಮಾರಿ ಕುಟುಂಬಗಳು 40 ಕ್ಕೂ ಹೆಚ್ಚು ವರ್ಷಗಳಿಂದ ವಾಸವಾಗಿದ್ದಾರೆ. ಅವರಲ್ಲಿ ದುರ್ಗಾಮುರ್ಗಿ, ಸುಡುಗಾಡು ಸಿದ್ದ, ಬಯಲ್ ಪತ್ತರ್, ಕಿಳ್ಳೆಕ್ಯಾತ, ಆದಿ ಕರ್ನಾಟಕ ಹೀಗೆ ನಾನಾ ಅಲೆಮಾರಿ ಜಾತಿಯ ಜನರಿದ್ದಾರೆ. ಜೀವನೋಪಾಯಕ್ಕಾಗಿ ರದ್ದಿ (ಗುಜರಿ) ಹಾಯುವುದು, ಸ್ಟವ್ ರಿಪೇರಿ, ಫೋಟೊ ಫ್ರೇಮ್ ಹಾಕುವುದು, ಕೂಲಿ ಕೆಲಸ, ಭಿಕ್ಷೆ ಬೇಡುತ್ತಾರೆ. ಇವರ ಮಕ್ಕಳು ಅಂಗನವಾಡಿಯಿಂದ ಹಿಡಿದು 10ನೆ ತರಗತಿವರೆಗೆ ಓದುತ್ತಿದ್ದಾರೆ. ಇಲ್ಲಿರುವ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದೇ ಬಯಲನ್ನೇ ಆಶ್ರಯಿಸುವಂತಾಗಿದ್ದು, ಇವರಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಮತ್ತು ಸೋಲಾರ್ ದೀಪ ಒದಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಸಂಘಟನೆಯ ಪ್ರಮುಖರಾದ ಅನಿಲ್ ಕುಮಾರ್, ಜಾರ್ಜ್ ಸಾಲ್ಡಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News