ಸಾಮಾಜಿಕ ಪಿಡುಗಿನ ವಿರುದ್ಧ ಒಂದಾಗೋಣ: ಅಕ್ಬರ್ ಅಲಿ
ಬಂಗಾರಮಕ್ಕಿ, ಎ.21: ದೇಶದ ಎಲ್ಲ ಧರ್ಮ, ಮತಗಳು ಏಕ ವೇದಿಕೆಗೆ ಬಂದು ಸಾಮಾಜಿಕ ಪಿಡುಗುಗಳ ನಿವಾರಣೆ ಬಗ್ಗೆ ಒಟ್ಟಾಗಿ ಚಿಂತಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಕ್ಬರ್ ಅಲಿ ಉಡುಪಿ ಆಶಿಸಿದರು.
ಅವರು ಬಂಗಾರಮಕ್ಕಿಯಲ್ಲಿ ನಡೆಯುತ್ತಿರುವ ಸಂಸ್ಕೃತಿ ಕುಂಭದಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ದೇಶದ ಎಲ್ಲ ಧರ್ಮದ ಯುವ ಪೀಳಿಗೆ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಸಮಾಜದಲ್ಲಿ ಕ್ರೌರ್ಯ ಹೆಚ್ಚಿದೆ. ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಭಾರತೀಯ ಕೌಟುಂಬಿಕ ಪದ್ಧತಿ ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ಅದನ್ನು ಕಸಿದುಕೊಂಡು ಹಣ ಬಾಚುವ ಷಡ್ಯಂತ್ರ ಬಂಡವಾಳಶಾಹಿಗಳಿಂದ ನಡೆದಿದೆ. ಇದು ಎಲ್ಲ ಧರ್ಮಗಳ ಸಂಕಟ. ಇದರಿಂದ ಹೊರಬರಲು ಎಲ್ಲ ಧರ್ಮ ಮತಗಳು ಸೇರಿ ಯಾಕೆ ಒಂದೇ ಅಜೆಂಡಾ ರೂಪಿಸಿಕೊಳ್ಳಬಾರದು ಎಂದು ಅಲಿ ಪ್ರಶ್ನಿಸಿದರು. ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿದ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಇಡೀ ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸುವ ಶಕ್ತಿ ಭಾರತಕ್ಕೆ ಮಾತ್ರ ಇದೆ. ಏಕೆಂದರೆ ಇಲ್ಲಿ ಎಲ್ಲ ಧರ್ಮಗಳೂ ಒಟ್ಟಾಗಿ ಕುಳಿತು ದೇಶ- ಸಮಾಜದ ಬಗ್ಗೆ ಚಿಂತಿಸುವಂತಹ ವಾತಾವರಣ ಇದೆ ಎಂದ ಅವರು, ಜಗತ್ತು ಇಂದು ಹಿಂಸೆಯ ಜ್ವಾಲೆಯಲ್ಲಿ ಬೇಯುತ್ತಿದೆ. ಕೆಲವೇ ಜನರ ಕ್ಷುಲ್ಲಕ ಭಾವನೆಗೆ ಜನ ನೋಯುತ್ತಿದ್ದಾರೆ. ಧರ್ಮದ ಹೆಸರಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ನಡೆದಿರುವ ಸಂಘರ್ಷ ರಕ್ತಪಾತ ನಡೆದಿರುವುದು ಖೇದಕರ. ಭಾರತೀಯ ತತ್ವದಲ್ಲಿ ಎಲ್ಲರನ್ನೂ ಸ್ವೀಕರಿಸುವ ಮನೋಭಾವವಿದೆ. ಸಹಸ್ರಾರು ವರ್ಷಗಳ ಕಾಲ ಎಷ್ಟೋ ಜನ ನಮ್ಮನ್ನು ಆಳಿದರೂ, ನಾವು ಅವರನ್ನೆಲ್ಲ ಶಾಂತವಾಗಿ ಸಹಿಸಿಕೊಂಡಿದ್ದೆವು ಎಂದರು.
ಮನುಷ್ಯನನ್ನು ಉಳಿಸುವುದು ನಿಜವಾದ ಧರ್ಮವಾಗಿದ್ದು ಹಿಂದೂ, ಮುಸ್ಲಿಮ್ , ಕ್ರೈಸ್ತರು ಪರಸ್ಪರ ಅನ್ಯರ ಧಾರ್ಮಿಕ ಕೇಂದ್ರಗಳಿಗೆ ಭೇಟಿಯಿತ್ತು ಚರ್ಚಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು. ಸಾಧು ಸುಂದರ ಮಾತನಾಡಿ, ನಾವು ಭಾರತೀಯರಾಗಿದ್ದು, ಪರಸ್ಪರ ಪ್ರೀತಿಯಿಂದ ಬದುಕುವಂತಾಗಬೇಕು. ಧರ್ಮದಲ್ಲಿ ಮೇಲು ಕೀಳು ಎಂಬ ತಾರತಮ್ಯ ಇರಬಾರದು. ಯಾವುದೇ ಧರ್ಮ ಹಿಂಸೆಯನ್ನು ಪ್ರತಿಪಾದಿಸಿಲ್ಲ. ಎಲ್ಲರೂ ಭಾರತೀಯತೆಯ ಅಡಿಯಲ್ಲಿ ಸೌಹಾರ್ದದಿಂದ ಬದುಕಬೇಕು ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ಕ್ಷೇತ್ರದ ಧರ್ಮಾಧಿಕಾರಿ ಮಾರುತಿ ಗುರೂಜಿ ಆಶೀರ್ವಚನ ನೀಡಿ, ಮಾನವೀಯತೆಯು ಎಲ್ಲ ಧರ್ಮಗಳ ಸಾರವಾಗಿದ್ದು, ವಿಶ್ವ ಮಾನವೀಯತೆಯ ಛತ್ರದಡಿ ಎಲ್ಲರೂ ಒಂದಾಗಿ ಭಾರತವನ್ನು ಬಲಿಷ್ಠಗೊಳಿಸಬೇಕು. ವಿಶ್ವಕ್ಕೆ ಮತ್ತೊಮ್ಮೆ ಜಗದ್ಗುರು ಆಗಬೇಕು ಎನ್ನುವುದು ನಮ್ಮ ಆಶಯ ಎಂದರು. ಭಟ್ಕಳ ಸಹಾಯಕ ಆಯುಕ್ತ ಚಿದಾನಂದ ವಠಾರೆ, ಗ್ರಾಪಂ ಸದಸ್ಯರಾದ ಶಾರದಾ ಉಪ್ಪಾರ, ಗೋವಿಂದ ಎಸ್.ನಾಯ್ಕ, ಮಂಜುನಾಥ ಮಾದೇವ ನಾಯ್ಕ, ಶಾರದಾ ಗಣಪತಿ ಮೇಸ್ತ, ನಾಸಿರ್ ಸಾಬ್, ಉದ್ಯಮಿ ಮುಝಫ್ಫರ್ ಯುಸುಫ್ ಸಾಬ್, ರೆ. ಬೆಂಜಮಿನ್ ಕೊಳ್ಳೆಗಾಲ್, ಹೇಮಚಂದ್ರ ಕುಮಾರ್, ಪ್ರಗತಿ ಫೌಂಡೇಶನ್ ಅಧ್ಯಕ್ಷ ವಿ. ನಾರಾಯಣಸ್ವಾಮಿ, ಪಾಸ್ಟರ್ ಆಂಟೋನಿ ಎಚ್.ಕೆ ಉಪಸ್ಥಿತರಿದ್ದರು. ರಜನಿ ಪ್ರಾರ್ಥಿಸಿ, ಕುಂಭದ ಪ್ರಧಾನ ಸಂಚಾಲಕ ಸಿದ್ದು ಯಾಪಲಪರವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಲ್ಪನಾ ಹೆಗಡೆ, ಮೇಘನಾ ಕಶ್ಯಪ್ ಕಾರ್ಯಕ್ರಮ ನಿರ್ವಹಿಸಿದರು.