ಬರ ಪರಿಹಾರ ಕಾಮಗಾರಿಗಳನ್ನು ಕೆಗೊಳ್ಳಲು ಸೂಚನೆ: ಸಚಿವ ಡಾ.ಜಿ.ಪರಮೇಶ್ವರ್
ಚಿಕ್ಕಮಗಳೂರು, ಎ.21: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಬರಪರಿಹಾರ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಬರಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಅದಕ್ಕೆ ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳು ಹಾಗೂ ಜಾನುವಾರುಗಳಿಗೆ ಮೇವು, ಭೂರಹಿತ ಕಾರ್ಮಿಕರಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಬರಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 450 ಹಳ್ಳಿಗಳಲ್ಲಿ ತೀವ್ರ ತರವಾದ ಕುಡಿಯುವ ನೀರಿನ ಸಮಸ್ಯೆ ಹಾಗೂ 4 ತಾಲೂಕುಗಳಲ್ಲಿ ಮಳೆ ಕೊರತೆ, ಬೇಸಿಗೆ ದಿನಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಬರಪರಿಹಾರ ಕಾಮಗಾರಿಗಳು ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಹಿನ್ನೆಲೆಯಲ್ಲಿ ಕೂಡಲೇ 5 ಕೋಟಿ ರೂ. ಬಿಡುಗಡೆ ಮಾಡಲು ಕೋರಿದ್ದಾರೆ.
ಬರಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 3 ತೀವ್ರ ಬರಪೀಡಿತ ಪ್ರದೇಶಗಳಿಗೆ 3 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಅದರಲ್ಲಿ 1.5 ಕೋಟಿ ರೂ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಡೆಗಳಲ್ಲಿ ಪೈಪ್ ಲೈನ್ ಅಳವಡಿಕೆ, ಜಲಮೂಲ ಹುಡುಕಿ ಬೋರ್‌ವೆಲ್ ಕೊರೆಯುವುದು, ಟ್ಯಾಂಕರ್ ಮೂಲಕ ನೀರು ನೀಡಲು ಬಳಸಬಹುದಾಗಿದೆ. 1.5 ಕೋಟಿ ರೂ. ಜಾನುವಾರುಗಳಿಗೆ ಮೇವು ಅಭಾವವಿರುವ ಕಡೆಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲು ಅನುದಾನ ನೀಡಲಾಗಿದೆ ಎಂದರು.
ಅಲ್ಲದೆ ಜಿಲ್ಲೆಯಲ್ಲಿ ಸಂಭವಿಸಬಹುದಾದ ಕುಡಿ ಯುವ ನೀರಿನ ಸಮಸ್ಯೆಗಾಗಿ 50 ಲಕ್ಷ ರೂ. ನೀಡಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ 50 ಲಕ್ಷ ರೂ. ತುರ್ತು ಕುಡಿಯುವ ನೀರಿನ ಪರಿಹಾರ ಕೈಗೊಳ್ಳಬಹುದಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ಬೆಳೆಗಳಿಗೆ ಪರಿಹಾರ, ಸಬ್ಸಿಡಿ ಹಾಗೂ ಬಿತ್ತನೆ ಬೀಜ ನೀಡುವುದಕ್ಕಾಗಿ 21 ಕೋಟಿ 37 ಲಕ್ಷ ರೂ. ಹಣ ಬಿಡುಗಡೆಯಾಗಿದ್ದು ಪರಿಹಾರ ಕಾರ್ಯ ತಕ್ಷಣ ಕೈಗೊಳ್ಳಲು ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.