ಹಸಿರು ವಲಯದಲ್ಲಿ ಲೇಔಟ್ ನಿರ್ಮಾಣಕ್ಕೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಕೆ.ಜೆ.ಜಾರ್ಜ್

Update: 2016-04-21 17:54 GMT

ಬೆಂಗಳೂರು, ಎ. 21: ಬೆಂಗಳೂರು ಸುತ್ತಮುತ್ತಲಿನ ಹಸಿರು ವಲಯಗಳಲ್ಲಿ ಅನಧಿಕೃತ ಲೇಔಟ್ ತಲೆಎತ್ತಲು ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಬೆಂ.ನಗರ ಜಿ.ಪಂ.ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯ ರಮೇಶ್ ಪ್ರಸ್ತಾಪಕ್ಕೆ ಉತ್ತರ ನೀಡಿದ ಅವರು, ಹಸಿರು ವಲಯದಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬೇಡಿ ಎಂದು ಇದೇ ವೇಳೆ ಆದೇಶ ನೀಡಿದರು.
ಬೆಟ್ಟದಲಸೂರು ಕಲ್ಲು ಕ್ವಾರೆಯು 250 ಅಡಿ ಆಳವಿದ್ದು, 200ಅಡಿ ನೀರು ನಿಂತಿದ್ದು, ಈ ಕೆರೆಯಲ್ಲಿ ಈಜಲು ಹೋದ ಅನೇಕರು ಪ್ರಾಣ ಕಳೆದುಕೊಂಡಿರುತ್ತಾರೆ. ಈ ಕ್ವಾರೆ ಸುತ್ತ ತಡೆಗೋಡೆಯನ್ನು ನಿರ್ಮಿಸಲು 80ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ. ಅಲ್ಲದೆ, ಈ ಕೆರೆಯನ್ನು ನಗರ ಜಿಲ್ಲೆಗೆ ಜಲಸಂಪನ್ಮೂಲವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕೆಂದು ಜಾರ್ಜ್ ಹೇಳಿದರು.
ನಗರದ ಹೊರ ವಲಯದಲ್ಲಿ 79ಅಪಾಯಕಾರಿ ಕೆರೆಗಳಿದ್ದು, ಅಂತಹ ಕೆರೆಗಳಿಗೆ ಮುಳ್ಳುತಂತಿ ನಿರ್ಮಿಸ ಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ.ಶಂಕರ್, ಸಚಿವರ ಗಮನಕ್ಕೆ ತಂದರು. ಪಾಪನಹಳ್ಳಿ ಗ್ರಾಮದಲ್ಲಿ ರಾಜ್ಯಕ್ಕೆ ಮಾದರಿಯಾದ ಶಾಲೆಯಿದ್ದು, ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಕೂಡಲೇ ನೇಮಕ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು.
ಈ ಶಾಲೆಯನ್ನು ಸುಮಾರು 4.5 ಕೋಟಿ ರೂ.ವೆಚ್ಚದಲ್ಲಿ ದಾನಿಗಳು ನೀಡಿದ್ದು, ಇಂತಹ ಶಾಲೆಗೆ ಶಿಕ್ಷಕರಿಲ್ಲದಿರುವುದು ದಾನಿಗಳಿಗೆ ಅಗೌರವ. ಆದುದರಿಂದ ನೇಮಕಾತಿ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸಚಿವರು ಇದೇ ವೇಳೆ ಸೂಚಿಸಿದರು.
ಆರಂಭಕ್ಕೆ ನಗರದ ಸುತ್ತಮುತ್ತ ಹಸಿರು ವಲಯಗಳ ವ್ಯಾಪ್ತಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಟ್ಟಹಲಸೂರು, ಜಾಲ ಹೋಬಳಿ ಸೇರಿ ಬೆಂ.ನಗರ ಜಿಲ್ಲೆಯ ಅನಧಿಕೃತ ಲೇಔಟ್‌ಗಳು ತಲೆ ಎತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವಿಶ್ವನಾಥ್, ಸಚಿವರನ್ನು ಒತ್ತಾಯಿಸಿದರು. ಇಂತಹ ಲೇಔಟ್‌ಗಳಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಅಧಿಕಾರಿಗಳು ನಿರ್ಲಕ್ಷತೆ ವಹಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಆರ್‌ಟಿಇ ನೇಮಕಾತಿ ಶೇ.99ರಷ್ಟು ಮುಗಿದಿದೆ. ಆನ್‌ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದೆ ಎಪ್ರಿಲ್‌ನಲ್ಲೆ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ನಗರ ಜಿಲ್ಲೆಯಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. 5 ತಿಂಗಳಿಂದ ಜಿ.ಪಂ. ಇಂಜಿನಿಯರಿಂಗ್ ವಿಭಾಗದಿಂದ ಯಾವುದೇ ಬೋರ್‌ವೆಲ್ ಕೊರೆದಿರುವುದಿಲ್ಲ ಎಂದು ವಿಶ್ವನಾಥ್ ಆಕ್ಷೇಪಣೆ ವ್ಯಕ್ತಪಡಿಸಿದರು. ಪ್ರಸಕ್ತ ವರ್ಷ 60.25ಕೋಟಿ ರೂ.ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ನೀರಿನ ಸಮಸ್ಯೆ ಇರುವ 25 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬೋರ್‌ವೆಲ್‌ಗಾಗಿ 117 ಅರ್ಜಿಗಳಿಗೆ ಶಾಸಕರು ಒಪ್ಪಿಗೆ ನೀಡಿದ್ದಾರೆ. ಇದಕ್ಕಾಗಿ 3ಕೋಟಿ ರೂ.ವನ್ನು ಒದಗಿಸಲಾಗಿದೆ ಎಂದು ಕಾರ್ಯಪಾಲಕ ಇಂಜಿನಿಯರ್ ಮಾಹಿತಿ ನೀಡಿದರು. ಹಿಂದಿನ ವರ್ಷ ಬೋರ್‌ವೆಲ್ ದುರಸ್ತಿಗಾಗಿ ಜಿಲ್ಲೆಗೆ 6.5ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ಈ ವರ್ಷ 7ಕೋಟಿ ರೂ. ಬಿಡುಗಡೆ ಮಾಡಲು ಸರಕಾರವನ್ನು ಕೋರಲಾಗಿದೆ ಎಂದು ಶಂಕರ್ ಹೇಳಿದರು. ದಕ್ಷಿಣ ಪೀನಾಕಿನಿಯಿಂದ ಆನೇಕಲ್ ತಾಲೂಕಿನ 62ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ತುಂಬಿಸಲು ಯೋಜನೆ ಸಿದ್ಧವಾಗಿದ್ದು, ಆಯವ್ಯಯದಲ್ಲಿ 240 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾರ್ಯಾರಂಭ ಮಾಡಲಾಗುವುದು ಎಂದು ಜಾರ್ಜ್ ಹೇಳಿದರು. ಜಿಲ್ಲೆಯಲ್ಲಿ ಅನಧಿಕೃತವಾಗಿ ಬಂಡೆಗಳನ್ನು ಸ್ಫೋಟಿಸುವುದರಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗುತ್ತಿದೆ. ಇವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಡೆ ದಾಳಿ ಮಾಡಿ ಅವರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ ಎಂದು ಉಪವಿಭಾಗಾಧಿಕಾರಿ ನಾಗರಾಜು ಸಭೆಯ ಗಮನಕ್ಕೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News