×
Ad

ಹೈಕೋರ್ಟ್‌ನಿಂದ ಮಧ್ಯಾಂತರ ತಡೆ

Update: 2016-04-21 23:25 IST

ಬೆಂಗಳೂರು, ಎ.21: ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪವಿರುದ್ಧ ಶಿವಮೊಗ್ಗ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ 12 ವಾರಗಳ ಕಾಲ ತಡೆಯಾಜ್ಞೆ ನೀಡಿ ಹೈಕೋರ್ಟ್ ಗುರುವಾರ ಮಧ್ಯಾಂತರ ಆದೇಶ ಹೊರಡಿಸಿದೆ.
ಲೋಕಾಯುಕ್ತ ಕೋರ್ಟ್ ಜಾರಿ ಮಾಡಿದ್ದ ಸಮನ್ಸ್ ರದ್ದು ಕೋರಿ ಮಾಜಿ ಸಿಎಂ ಯಡಿಯೂರಪ್ಪಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ. ಜೊತೆಗೆ, ಪ್ರಕರಣ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದ ವಕೀಲ ಬಿ.ವಿನೋದ್ ಅವರಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.
ಪ್ರಕರಣ ಹಿನ್ನೆಲೆ: ಬಿ.ಎಸ್.ಯಡಿಯೂರಪ್ಪಮತ್ತವರ ಪುತ್ರ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಬಳಿ ಅಕ್ರಮವಾಗಿ 66 ಎಕರೆ ಅರಣ್ಯ ಭೂಮಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಕೀಲ ವಿನೋದ್ ಶಿವಮೊಗ್ಗ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಎಪ್ರಿಲ್ 12ರಂದು ಬಿ.ಎಸ್.ಯಡಿಯೂರಪ್ಪಮತ್ತು ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿತ್ತು. ಈ ಸಮನ್ಸ್ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
 ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ. ಹಾಗೆಯೇ ತಮ್ಮ ವಿರುದ್ಧ ದೂರು ದಾಖಲಿಸಲು ಲೋಕಸಭೆ ಅಧ್ಯಕ್ಷರು ಅನುಮತಿ ನಿರಾಕರಿಸಿದ್ದಾರೆ. ಆದರೆ, ದೂರುದಾರರು ಕೋರ್ಟ್‌ಗೆ ತಪ್ಪುಮಾಹಿತಿ ನೀಡಿ ವಿಚಾರಣೆ ಮುಂದುವರಿಸಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಲೋಕಾಯುಕ್ತ ಕೋರ್ಟ್‌ನಲ್ಲಿ ಜಾರಿ ಮಾಡಿದ ಸಮನ್ಸ್ ರದ್ದುಪಡಿಸುವಂತೆ ಯಡಿಯೂರಪ್ಪ ನ್ಯಾಯಾಲಯವನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News