ಆರೋಪಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಎ.21: ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ ಭಾಗಿಯಾದವರ ಆರೋಪಿಗಳ ವಿರುದ್ಧದ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಸಂಬಂಧ ಒಂಬತ್ತು ಜನ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿದೆ. 1998, 1999, 2014ರಲ್ಲಿ ನಡೆದಿದೆ ಎನ್ನಲಾದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಕೆಪಿಎಸ್ಸಿಯಲ್ಲಿನ ಸದಸ್ಯರು ಹಾಗೂ ಅಧಿಕಾರಿ ಗಳು ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಇವರುಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಲವಾದ ಸಾಕ್ಷಾಧಾರಗಳು ಇಲ್ಲವೆಂಬ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ನ್ಯಾಯಪೀಠ ಕೂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ಪ್ರಕರಣವನ್ನು ರದ್ದುಗೊಳಿಸಿದೆ. ಅಲ್ಲದೆ, ರಾಜ್ಯ ಸರಕಾರಕ್ಕೆ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನಾಳೆ ನ್ಯಾಯಪೀಠಕ್ಕೆ ಸಲ್ಲಿಸಬೇಕೆಂದು ಸೂಚನೆ ನೀಡಿದೆ. ಕೆಪಿಎಸ್ಸಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೇಗೆ ನೇಮಕ ಮಾಡುತ್ತೀರಿ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ನೇಮಕ ಮಾಡಿದರೆ ಕೆಪಿಎಸ್ಸಿ ನಡೆಸುವ ಹುದ್ದೆಗಳಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆಗಳಿರುತ್ತವೆ. ಇದರಿಂದ, ಜನರಿಗೆ ತೊಂದರೆಯಾಗುವುದಿಲ್ಲವೇ ಎಂದು ನ್ಯಾಯಪೀಠ ಪ್ರಶ್ನಿಸಿದೆ.