ಜನರಿಗೆ ನೀರು ಕೊಡಲು ಮಿತಿ ಬೇಡ: ಸಚಿವ ದೇಶಪಾಂಡೆ
ಹೊನ್ನಾವರ,ಎ.22: ಕುಡಿಯುವ ನೀರಿನ ಅಗತ್ಯ ಇರುವ ಹಳ್ಳಿಗಳಲ್ಲಿ ಹಾಗೂ ಪಟ್ಟಣದಲ್ಲಿ ಜನರಿಗೆ ಅಗತ್ಯವಿದ್ದಷ್ಟು ನೀರು ಕೊಡಬೇಕು. ಕುಡಿಯುವ ನೀರಿನ ಬಗ್ಗೆ ದೂರುಗಳು ಬಾರದಂತೆ ಸಮರ್ಪಕವಾಗಿ ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದರು.
ಶುಕ್ರವಾರ ಪಟ್ಟಣದ ಪಪಂ ಸಭಾಭವನದಲ್ಲಿ ನಡೆದ ತಾಲೂಕಾ ಮಟ್ಟದ ಕುಡಿಯುವ ನೀರು, ಬರಗಾಲ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆೆಯಲ್ಲಿ ಮಾತನಾಡಿದ ಅವರು ಒಂದು-ಎರಡು ಕೊಡ ನೀರು ಕೊಡುವ ಪದ್ಧತಿ ಮಾಡಬೇಡಿ. ಜನರಿಗೆ, ಜಾನುವಾರುಗಳಿಗೆ ಎಷ್ಟು ಅಗತ್ಯವೋ ಅಷ್ಟು ನೀರುಕೊಡಿ. ಅದಕ್ಕೆ ಪರಿಮಿತಿ ಬೇಡ ಎಂದು ಸೂಚಿಸಿದರು.
ಸರಕಾರದಲ್ಲಿ ಹಣವಿದೆ. ಹಣದ ಕೊರತೆ ಇಲ್ಲ. ನೀರು ಕಡಿಮೆ ಕೊಡುವ ಅಗತ್ಯವಿಲ್ಲ. ಯಾರಿಂದಲೂ ದೂರು ಕೇಳಿಬರಬಾರದು ಸರಕಾರಕ್ಕೆ ಕೆಟ್ಟ ಹೆಸರು ತರಬಾರದು ಎಂದು ಎಚ್ಚರಿಸಿದರು. ಎಲ್ಲ ಗ್ರಾಪಂ ಕಾರ್ಯಾಲಯಗಳಲ್ಲಿ ಹಾಗೂ ಪಪಂ ಕಾರ್ಯಾಲಯದಲ್ಲಿ ದೂರು ರಿಜಿಸ್ಟರ್ ತೆರೆಯ ಬೇಕು. ಕುಡಿಯುವ ನೀರು ಕುರಿತು ಯಾರೇ ದೂರು ನೀಡಿದರೂ ತಕ್ಷಣ ಸ್ಪಂದಿಸಬೇಕು ಜನರು ಕಂಟ್ರೋಲ್ ರೂಮ್‌ಗೂ ಕರೆ ಮಾಡಬಹುದು ಎಂದು ಸೂಚಿಸಿದರು. ಎಪ್ರಿಲ್ 26 ರೊಳಗೆ ಎಲ್ಲ ಗ್ರಾಪಂ ವ್ಯಾಪ್ತಿಗಳಲ್ಲೂ ಆವಶ್ಯಕ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ವಿದ್ಯುತ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರಿನ ಅಭಾವ ಇದೆ ಎಂದು ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿರಬಾರದು. ಗಮನಕೊಟ್ಟು ಕೆಲಸ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳ ಬಗ್ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಶಾಸಕ ಮಂಕಾಳ ವೈದ್ಯ ಮಾತ ನಾಡಿ, ಹೊನ್ನಾವರ ತಾಲೂಕಿ ನಲ್ಲಿ 50 ರಷ್ಟು ಕುಡಿಯುವ ನೀರಿನ ಯೋಜನೆಗಳು ಕಳೆದ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಪೂರ್ಣಗೊಂಡಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ಷೇಪಿಸಿದರು. ಜಿಲ್ಲಾಧಿಕಾರಿಗಳು ಅಧಿಕಾರ ಸ್ವೀಕರಿಸಿದ ನಂತರ ಜನ ಸಾಮಾನ್ಯರ ಕೆಲಸವಾಗುತ್ತಿಲ್ಲ. ಒಂದು ಗುಂಟೆ ಎನ್‌ಎ ಆಗುತ್ತಿಲ್ಲ. ಜನಸಾಮಾನ್ಯರ ಮಾತಿಗೆ ಕವಡೆ ಕಿಮ್ಮತ್ತಿಲ್ಲ. ಇವರು ಜಿಲ್ಲಾಧಿಕಾರಿಯಾಗಲು ಅನಹರ್ರು. ಕುಡಿಯುವ ನೀರು ಟ್ಯಾಂಕ್‌ನಲ್ಲಿ ಸರಬರಾಜಿಗೆ ಐಆರ್‌ಬಿ ಕಂಪೆನಿಗೆ ಯಾರು ಹಸ್ತಾಂತರಿಸಿದರು. ಜಿಲ್ಲಾಧಿಕಾರಿಗಳ ಅಧೀನ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಮಾತನ್ನು ಕೇಳಿ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಜನಪ್ರತಿನಿಧಿಗಳು ಇರುವುದೇಕೆ? ನೀರು ಸರಬರಾಜಿನಲ್ಲೂ ಜನಪ್ರತಿನಿಧಿಗಳು ಹಣ ತಿನ್ನುವುದಿಲ್ಲ. ಜಿಲ್ಲಾಧಿಕಾರಿಗಳ ಬಡವರ ಕೆಲಸ ಮಾಡಿದು,್ದ ಒಂದೇ ಒಂದು ನಿದರ್ಶನ ತೋರಿಸಿದರೆ ನಾನು ಕ್ಷಮೆ ಕೇಳಿ ಸಭೆಯಿಂದ ನಿರ್ಗಮಿಸುತ್ತೇನೆ. ಸಚಿವರ ಸಮ್ಮುಖದಲ್ಲಿ ಕೆಡಿಪಿಯಲ್ಲಿ ನೀರಿನ ಸರಬರಾಜು ಕುರಿತು ತಿಳಿಸಲಾಗಿತ್ತು. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಕಳೆದ ಒಂದೂವರೆ ವರ್ಷದಿಂದ ಹಣ ಸಂದಾಯವಾಗದೇ ಯಾರು ನೀರು ಪೂರೈಸಲು ಮುಂದಾಗುತ್ತಿಲ್ಲ. ನಿಮ್ಮಿಂದ ಜನಪ್ರತಿನಿಧಿಗಳು ನಾಚಿಕೆ ಪಡುವಂತಾಗಿದೆಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ಕಾನೂನಿನಂತೆ ಬಿಲ್ ಪಾವತಿಸಲಾಗಿದೆ. ಎಂದು ತಿಳಿಸಿದರು. ಸಚಿವರು ಸ್ಥಳೀಯ ಶಾಸಕರು ಸೂಚಿಸಿದಂತೆ ಕುಡಿಯುವ ನೀರನ್ನು ಟ್ಯಾಂಕರ್‌ನಲ್ಲಿ ಪೂರೈಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಭಟ್ಕಳ ಉಪವಿಭಾಗಾಧಿಕಾರಿ ಚಿದಾನಂದ ವಠಾರೆ ಹಾಗೂ ತಹಶೀಲ್ದಾರ ಜಿ.ಎಂ.ಬೋರಕರ, ಪಂಚಾ ಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾ ಯಕ ಕಾರ್ಯನಿರ್ವಾಹಕ ಅಭಿಯಂತರ ಪವಾರ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಜಿಪಂ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ ಮನೋಹರ, ಜಿಪಂ ಸದಸ್ಯರಾದ ಶಿವಾನಂದ ಹೆಗಡೆ, ದೀಪಕ ನಾಯ್ಕ, ಪುಷ್ಪಾ ನಾಯ್ಕ, ಸವಿತಾ ಗೌಡ, ಚಂದ್ರಶೇಖರ ಗೌಡ ಮತ್ತಿತರರು ಉಪಸ್ಥಿತರಿದ್ದರು.