ನಮ್ಮಲ್ಲಿ ಇಂದಿಗೂ ಬಡತನ ನಿವಾರಣೆಯಾಗಿಲ್ಲ: ಡಾ. ನಾ.ಡಿಸೋಜ

Update: 2016-04-22 16:15 GMT

ಸಾಗರ,ಎ.22: ನೆರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡಿದ್ದಾರೆ. ದೇಶದ ಆಗುಹೋಗುಗಳ ಬಗ್ಗೆ ಗಮನಿಸಿ ಅದಕ್ಕೆ ಪೂರಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವ್ಯವಸ್ಥೆ ಕೊಳೆತು ನಾರುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದ್ದಾರೆ.

ಇಲ್ಲಿನ ಎಲ್.ಬಿ.ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿ ವೇದಿಕೆ ಮತ್ತು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಾವು ಆರಿಸಿ ಕಳಿಸಿದ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜನರ ಏಳಿಗೆಗಾಗಿ ಜಾರಿಗೆ ತಂದ ಯಾವ ಯೋಜನೆಗಳು ಪೂರ್ಣ ಯಶಸ್ಸುಗೊಳ್ಳುತ್ತಿಲ್ಲ. ದೇಶದ ಬಡತನ ನಿವಾರಣೆ ಮಾಡಲು ಪಂಚವಾರ್ಷಿಕ ಯೋಜನೆ ಹಿಂದೆಯೆ ಜಾರಿಗೆ ತರಲಾಗಿದೆ. ಆದರೆ ನಮ್ಮಲ್ಲಿ ಇಂದಿಗೂ ಬಡತನ ದೂರವಾಗಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ದಾರಿಯನ್ನು ಸಮರ್ಥವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿಂದೆ ಓದಿದರೆ ಬುದ್ಧಿವಂತ ನಾಗುತ್ತಾನೆ, ಕೇಳಿದರೆ ಜ್ಞಾನ ಹೆಚ್ಚುತ್ತದೆ, ನೋಡಿದರೆ ದೃಷ್ಟಿ ವಿಕಾಸವಾಗುತ್ತದೆ ಮತ್ತು ಮಾತನಾಡಿದರೆ ವ್ಯಕ್ತಿತ್ವ ಬೆಳೆಯುತ್ತದೆ ಎಂದು ಹೇಳಲಾಗುತ್ತಿತ್ತು. ಬದಲಾದ ದಿನಮಾನಗಳಲ್ಲಿ ಓದಬೇಡಿ ವಿಶ್ಲೇಷಣೆ ಮಾಡಿ, ನೋಡಬೇಡಿ ವೀಕ್ಷಿಸಿ, ಕೇಳಬೇಡಿ ಕಿವಿಗೊಟ್ಟು ಆಲಿಸಿ ಮತ್ತು ಮಾತನಾಡಬೇಡಿ ಸಂಭಾಷಣೆ ಮಾಡಿ ಎಂದು ಬದಲಾಯಿಸಿಕೊಳ್ಳುವಂತಾಗಿದೆ ಎಂದು ಹೇಳಿದರು. ಜಾಗತೀಕರಣದಿಂದಾಗಿ ನಾವು ವಸ್ತುವಾಗಿ, ಗಿರಾಕಿಯಾಗಿ ಒಂದು ರೀತಿಯ ಬಲಿಪಶುವಾಗಿದ್ದೇವೆ. ಜಾಗತೀಕರಣ ಹೇರಿದ ರಾಷ್ಟ್ರಗಳು ಶ್ರೀಮಂತವಾಗುತ್ತಿದೆಯೆ ವಿನಃ ಅದನ್ನು ಅನುಸರಿಸುತ್ತಿರುವ ರಾಷ್ಟಗಳು ಬಡತನ ರೇಖೆಗೆ ಜಾರುತ್ತಿವೆೆ. ಯುವ ಸಮೂಹ ತಮ್ಮ ಬದುಕನ್ನು ಹೇಗೆ ಬದುಕಬೇಕು ಎನ್ನುವ ಕುರಿತು ಅರಿತುಕೊಳ್ಳಬೇಕು. ಶ್ರದ್ಧೆ ಮತ್ತು ಆಸಕ್ತಿಯಿಂದ ಜೀವನ ನಡೆಸಬೇಕು ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿ ಹಿರಿಯ ದೇಹದಾರ್ಢ್ಯಪಟು ಬಾಲಕೃಷ್ಣ ಗುಳೇದ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News