ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ: ಸಚಿವ ದೇಶಪಾಂಡೆ
ಹೊನ್ನಾವರ, ಎ.22: ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದ್ದು, ವೈದ್ಯರಲ್ಲಿ ಸೇವಾ ಮನೋಭಾವದ ಕೊರತೆ ಕಂಡುಬರುತ್ತಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ವಿಷಾದ ವ್ಯಕ್ತಪಡಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ 4.30 ಕೋಟಿ ರೂ. ವೆಚ್ಚದ 100 ಹಾಸಿಗೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ನಮ್ಮ ಹಿರಿಯರು ಬಹುಕಾಲ ಆರೋಗ್ಯವಾಗಿ ಬಾಳುತ್ತಿದ್ದರು. ಅದಕ್ಕೆ ಕಾರಣ ಸಾತ್ವಿಕ ಆಹಾರ ಮತ್ತು ಪರಿಸರ. ಒತ್ತಡ ಇಲ್ಲದೇ ಬದುಕುತ್ತಿದ್ದರು. ಶಿಕ್ಷಕರು ಮತ್ತು ವೈದ್ಯರು ಉತ್ತಮ ಸಮಾಜ ನಿರ್ಮಾಣಕ್ಕೆ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಎಲ್ಲರೂ ಉತ್ತಮ ಆರೋಗ್ಯವಂತರಾಗಿ ಆಸ್ಪತ್ರೆಗೆ ಬರುವುದು ತಪ್ಪುವಂತಾಗಬೇಕು. ಬಡವರಿಗೆ ಈ ಆಸ್ಪತ್ರೆ ಬಹು ಉಪಯುಕ್ತವಾಗಿದೆ ಎಂದರು.
ಶಾಸಕ ಮಂಕಾಳ ವೈದ್ಯ ಮಾತನಾಡಿ, ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ ಎಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು. ಹಿಂದೆ ಮೂಲಭೂತ ಸೌಲಭ್ಯ ಒದಗಿಸಲು ಹಣದ ಕೊರತೆಯಿತ್ತು. ಸರಕಾರ ಹೆಚ್ಚಿನ ಅನುದಾನ ನೀಡಿ ಸೌಲಭ್ಯ ಒದಗಿಸಿದೆ. ಸಚಿವರು ಶಿಕ್ಷಣ ಇಲಾಖೆಯ ಶಿಕ್ಷಕರನ್ನು ಹಾಗೂ ವೈದ್ಯರನ್ನು ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ವೈದ್ಯರು ಸೇವಾ ಮನೋಭಾವದಿಂದ ಆರೈಕೆ ಮಾಡಬೇಕು ಎಂದರು.
ಕಟ್ಟಡ ಗುತ್ತಿಗೆದಾರ ಶಿವಾನಂದ ಶೆಟ್ಟಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಭು ಗೌಡ, ಜಿಪಂ ಸದಸ್ಯರಾದ ಶಿವಾನಂದ ಹೆಗಡೆ, ದೀಪಕ್ ನಾಯ್ಕ, ಪುಷ್ಪಾ ನಾಯ್ಕ, ಸವಿತಾ ಗೌಡ, ತಾಪಂ ಸದಸ್ಯ ಗಣಪಯ್ಯ ಗೌಡ, ಲೋಕೇಶ್ ನಾಯ್ಕ, ಮೀರಾ ತಾಂಡೇಲ ಇತರರು ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಅಶೋಕ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪ್ರಕಾಶ್ ನಾಯ್ಕ ವಂದಿಸಿದರು.