ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಗಣ್ಯರ ಕರೆ
ಮಡಿಕೇರಿ, ಎ.22: ವಿಶ್ವದೆಲ್ಲೆಡೆ ಆಧುನೀಕರಣ, ಕೈಗಾರೀಕರಣದಿಂದಾಗಿ ಹೆಚ್ಚಿನ ಪರಿಸರ ನಾಶವಾಗುತ್ತಿದ್ದು, ಮಳೆಯ ಕೊರತೆ ಎದುರಾಗಿದೆ. ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಸಂರಕ್ಷಣೆಯತ್ತ ಹೆಚ್ಚಿನ ಕಾಳಜಿ ಅಗತ್ಯ ಎಂದು 1ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ವಕೀಲರ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕೊಡಗು ವಿದ್ಯಾಲಯದ ಭಾರತೀಯ ವಿದ್ಯಾಭವನದಲ್ಲಿ ವಿಶ್ವ ಭೂಮಿ ದಿನಾಚರಣೆ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶರು, ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಮರ ಗಿಡಗಳನ್ನು ಬೆಳೆಸುವತ್ತ ಹೆಚ್ಚಿನ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡುವಲ್ಲಿ ನಿಗಾವಹಿಸಬೇಕು. ಪರಿಸರ ಸಂರಕ್ಷಣೆಯನ್ನು ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭಿಸುವ ಅಗತ್ಯತೆ ಇದೆ. ಇದರ ಜೊತೆಗೆ ಶಾಲಾ ಮಟ್ಟದಲ್ಲಿ ಸ್ವಚ್ಛತೆ ಹಾಗೂ ಪರಿಸರದ ಮೇಲಿನ ಪ್ರೀತಿ ಹಾಗೂ ಕಾಳಜಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಂತೆ ಆಗಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು ಮಾತನಾಡಿ, ಪ್ರಸಕ್ತ ದಿನಗಳಲ್ಲಿ ವಿಶ್ವದಲ್ಲಿ ಪ್ರತಿ 5 ಜನರಲ್ಲಿ ಒಬ್ಬರಂತೆ ಕುಡಿಯುವ ನೀರಿನ ಕೊರತೆ ಸಂಭವಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಪರಿಸರ ನಾಶ. ಈ ದಿಸೆಯಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡುವಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲ ಈ. ಶ್ರೀನಿವಾಸನ್, ವಕೀಲ ಕೆ.ಡಿ. ದಯಾನಂದ ಮಾತನಾಡಿದರು.
ಇದೇ ಸಂದರ್ಭ ಪರಿಸರ ಸಂರಕ್ಷಣೆ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬೋಪಣ್ಣ, ಪ್ರಜ್ಞಾ ಮತ್ತು ಪ್ರಣಮ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಟಿ.ಸಿ.ಶ್ರೀಕಾಂತ್, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಮಯಂತಿ ಮತ್ತಿತರರು ಉಪಸ್ಥಿತರಿದ್ದರು.