×
Ad

ತೀರ್ಥಹಳ್ಳಿ: ಕುಡಿಯುವ ನೀರಿನ ಸಮಸ್ಯೆಯ ತುರ್ತು ಸಭೆ

Update: 2016-04-22 21:58 IST

ತೀರ್ಥಹಳ್ಳಿ, ಎ.22: ಜಿಲ್ಲೆಯಾದ್ಯಂತ ಮಳೆ ಬಾರದ ಕಾರಣ ಬರದ ಛಾಯೆ ಆವರಿಸಿದ್ದು, ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ತಾಲೂಕಿನ ಕುಡಿಯುವ ನೀರು ಹಾಗೂ ಬರದ ಸಮಸ್ಯೆಗಾಗಿ 50 ಲಕ್ಷ ರೂ. ಬಿಡುಗಡೆ ಮಾಡಿದ್ದು, ಉಳಿದ ಕಾಮಗಾರಿಗಳಿಗಾಗಿ 2 ಕೋಟಿ ರೂ. ಬೇಕಾಗಿದೆ. ಸರಕಾರಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕಿನಲ್ಲಿನ ಬರದ ಛಾಯೆ, ಕುಡಿಯುವ ನೀರಿನ ಸಮಸ್ಯೆಯ ಪ್ರಗತಿಪರಿಶೀಲನಾ ಸಭೆ ಹಾಗೂ ವಿಕಲಚೇತನರಿಗೆ ಸರಕಾರದಿಂದ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಿಕೊಳ್ಳಬೇಕು ಎಂದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದೆ. ಜೊತೆಗೆ ಕುಡಿಯುವ ನೀರು ಸಾರ್ವಜನಿಕರಿಗೆ ದೊರಕುವಂತೆ ಜಾಗೃತಗೊಳಿಸಬೇಕು ಎಂಬ ಎಚ್ಚರಿಕೆ ನೀಡಿದ್ದೆ. ತಾಲೂಕಿನ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಗ್ರಾಮಸ್ಥರು ಈ ಸಮಸ್ಯೆಯ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ಅಥವಾ ತಹಶೀಲ್ದಾರ್‌ರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ಸರಕಾರ ವಿಕಲಚೇತನರಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದೆ. ತಾಲೂಕಿನ ವಿಕಲ ಚೇತನರು ಸರಕಾರ ನೀಡುವ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಲಾನುಭವಿಗಳಿಗೆ ತಿಳಿಸಿದರು.

 ವಿಕಲಚೇತನರು ತಮ್ಮ ಸಮಸ್ಯೆಗಳನ್ನು ತನ್ನ ಮೊಬೈಲ್‌ಗೆ ಮೆಸೇಜ್ ಮುಖಾಂತರ ಮಾಹಿತಿ ತಿಳಿಸಿ. ಲಾನುಭವಿಗಳು ಸರಕಾರ ಕೊಟ್ಟಂತಹ ಲ್ಯಾಪ್‌ಟಾಪ್‌ನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್, ತಹಶೀಲ್ದಾರ್ ಲೋಕೇಶ್ವರಪ್ಪ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News