×
Ad

ಸೊರಬ: ಅಸಮರ್ಪಕ ಬಳಕೆಯಿಂದ ಕುಡಿಯುವ ನೀರಿನ ಅಭಾವ

Update: 2016-04-22 22:03 IST

ಮುಹಮ್ಮದ್ ಆರಿಫ್

ಸೊರಬ, ಎ.22: ಮಲೆನಾಡಿನ ಹೆಬ್ಬಾಗಿಲಾಗಿರುವ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದ್ದು, ಪ್ರಮುಖ ನದಿಗಳಾದ ವರದಾ ಹಾಗೂ ದಂಡಾವತಿ ಸೇರಿದಂತೆ ಕೆರೆಕಟ್ಟೆಗಳು ಬರಿದಾಗಿರುವುದರಿಂದ ಜನ, ಜಾನುವಾರುಗಳು ಕುಡಿಯುವ ನೀರಿಗೆ ಸಹ ಪರಿತಪಿಸುವಂತಾಗಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆ ತಾಲೂಕಿನದ್ದಾಗಿದ್ದರೂ ಸಹ, ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿರುವುದು ಹಾಗೂ ಅಳಿದುಳಿದ ನದಿ ನೀರನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದ್ದು, ಅತಿ ಹೆಚ್ಚು ಕೆರೆಗಳಿದ್ದರೂ ಸಹ ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳ ಮೊರೆ ಹೋಗುವಂತಾಗಿದೆ. ಕೆಲವಡೆ ಕೊಳವೆ ಬಾವಿಗಳನ್ನು ಎಷ್ಟೇ ಆಳದವರೆಗೂ ಕೊರೆಸಿದರೂ ಸಹ ನೀರು ದೊರೆಯದಂತಾಗಿದೆ. ಕುಡಿಯುವ ನೀರಿಗಾಗಿ ಜನತೆ ಅಲೆದಾಡುವ ದೃಶ್ಯಗಳು ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಬರಗಾಲದ ಜೊತೆಗೆ ಹಿಂದೆಂದೂ ಕಾಣದಷ್ಟು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಪೂರೈಸಲಾಗುತ್ತಿದೆ. ಜಾನುವಾರುಗಳು ನೀರಿಗಾಗಿ ತೋಟಗಳಲ್ಲಿರುವ ಪಂಪ್‌ಸೆಟ್ ಬಳಿ ನಿರ್ಮಿಸಿರುವ ನೀರಿನ ತೊಟ್ಟಿಗಳನ್ನು ಹುಡುಕುವಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ತಾಪಮಾನ ಹೆಚ್ಚಾಗುತ್ತಿದ್ದರೆ, ಅರಣ್ಯಗಳಲ್ಲಿನ ನೀರಿನ ಮೂಲಗಳು ಸಹ ಬರಿದಾಗಿ ಪ್ರಾಣಿ ಪಕ್ಷಿಗಳು, ವನ್ಯ ಜೀವಿಗಳು ಜನವ ಸತಿ ಪ್ರದೇಶಗಳಿಗೆ ಬರುವುದರಲ್ಲಿ ಸಂಶಯವಿಲ್ಲ.

ಮಂಚಿ ಕೆರೆಯೂ ಖಾಲಿ: ಮರ ವನ್ನು ಬೇರು ಸಮೇತ ಕಿತ್ತು ತರುವ ಪವಾಡದ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಮಂಚಿ ಗ್ರಾಮದ ಕೆರೆಯು ಸಹ ಬರಿದಾಗಿದೆ. ಬರದ ಪರಿಣಾಮವಾಗಿ ಕೆರೆಯ ಅಂಗಳದಲ್ಲಿ ಬಿರುಕುಗಳು ಕಾಣುತ್ತಿದೆ. ನೀರಿಲ್ಲದೆ ಕೆರೆಯ ಒಡಲು ಸಂಪೂರ್ಣ ಒಣಗಿ ನಿಂತಿದ್ದು, ಆಟದ ಮೈದಾನದಂತೆ ಕಾಣುತ್ತಿದೆ.

 ಉರುನಹಳ್ಳಿ, ಅಂಡಗಿ, ಮಂಚಿ, ಎಣ್ಣೆಕೊಪ್ಪ, ಕುಂಬಾರಕೊಪ್ಪ, ತತ್ತೂರು, ವಡ್ಡಿಗೆರೆ, ಎಸ್.ಎನ್. ಕೊಪ್ಪ, ಕಾನಕೊಪ್ಪ, ಹೊಸೂರು, ಹಿರೇಮಾಗಡಿ, ವಡ್ಡಿಗೆರೆ, ವಕ್ಕಲಿಗೆರೆ, ಗಂಗೊಳ್ಳಿ, ಬೆಲವಂತನಕೊಪ್ಪಸೇರಿದಂತೆ ತಾಲೂಕಿನ ಮುಂತಾದ ಕೆರೆಗಳು ನೀರಿ ಲ್ಲದೆ ಸಂಪೂರ್ಣ ಒಣಗಿವೆ. ಮಳೆಗಾಲ ಆರಂಭವಾಗುವವರೆಗೂ ಕೆರೆಗಳ ಸಮಸ್ಯೆ ಹೀಗೆ ಮುಂದುವರಿಯಲಿದೆ. ಜಾನುವಾರುಗಳಿಗೆ ಮೇವಿಲ್ಲ

: ನೀರಿನ ಅಭಾವದ ಜೊತೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಲ್ಬಣಿಸಿ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಹಲವಡೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದರಿಂದ ರೈತರು ಜಾನುವಾರುಗಳನ್ನು ಮಾರಾಟ ಮಾಡಲು ಸಹ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಹೈನರಾಸುಗಳನ್ನು ಹೊರತುಪಡಿಸಿ ಉಳಿದ ಜಾನುವಾರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾರೆ ಎಂಬ ಮಾಹಿತಿ ಇದೆ. ಮೇವಿನ ಕೊರತೆ ನೀಗಿಸಲು ತಾಲೂಕಿನಿಂದ ನೆರೆಯ ಜಿಲ್ಲೆ ಅಥವಾ ತಾಲೂಕಿಗೆ ರಫ್ತಾಗುವ ಮೇವುಗಳನ್ನು ತಡೆಯುವತ್ತ ಜನಪ್ರನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಹ ಎಚ್ಚೆತ್ತುಕೊಳ್ಳಬೇಕು. ಇಷ್ಟೆಲ್ಲ ಸಮಸ್ಯೆಯಿಂದ ಬಳಲುತ್ತಿರುವ ರೈತ ಸಮೂಹದ ನೆರವಿಗೆ ಸರಕಾರ ಧಾವಿಸಬೇಕು. ಜೊತೆಗೆ ಜಾನುವಾರುಗಳ ಮೇವಿನ ಕೊರತೆ ಇರುವ ಪ್ರದೇಶದಲ್ಲಿ ಸುಸಜ್ಜಿತ ಮೇವು ಬ್ಯಾಂಕ್ ಸ್ಥಾಪನೆಗೆ ಮುಂದಾಗಬೇಕು ಎನ್ನುವುದು ರೈತರ ಆಗ್ರಹ. ಒಟ್ಟಾರೆ ಈ ಬಾರಿ ಬರದ ಬಿಸಿಗೆ ಮಲೆನಾಡು ಪ್ರದೇಶವು ಸಹ ತುತ್ತಾಗಿದ್ದು, ಉಳಿದ ನೀರನ್ನು ಮಿತವಾಗಿ ಬಳಸುವುದು, ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ತಡೆಯುವುದು, ಇಂಗು ಗುಂಡಿಗಳನ್ನು ನಿರ್ಮಿಸುವುದು ಮತ್ತು ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡುವುದು ಸೇರಿದಂತೆ ಅನೇಕ ಜಾಗೃತಿಗಳನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಸಂಬಂಧಪಟ್ಟ ಇಲಾಖೆಯ ಮಹತ್ವಪೂರ್ಣ ಜವಾಬ್ದಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News