×
Ad

ಶಿವಮೊಗ್ಗ ನಗರದ ಮೂರು ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ

Update: 2016-04-22 22:04 IST

ಶಿವಮೊಗ್ಗ, ಎ.22: ಕಮಿಷನರೇಟ್ ವ್ಯವಸ್ಥೆಯಿರುವ ನಗರಗಳಲ್ಲಿನ ಪೊಲೀಸ್ ಠಾಣೆಗಳ ಮಾದರಿಯಲ್ಲಿ, ಶಿವಮೊಗ್ಗ ನಗರದ ಮೂರು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಗೃಹ ಇಲಾಖೆ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಕೂಡ ಹೊರಡಿಸಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ದೊಡ್ಡಪೇಟೆ, ತುಂಗಾನಗರ ಹಾಗೂ ಮಹಿಳಾ ಪೊಲೀಸ್ ಠಾಣೆಗಳೇ ಮೇಲ್ದರ್ಜೆಗೇರುತ್ತಿರುವ ಠಾಣೆಗಳಾಗಿವೆ. ಪ್ರಸ್ತುತ ಈ ಪೊಲೀಸ್ ಠಾಣೆಗಳಲ್ಲಿ ಸಬ್ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಯು ಠಾಣೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಲ್ ಇನ್‌ಸ್ಪೆಕ್ಟರ್‌ಗಳು ಈ ಠಾಣೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮೇಲ್ದರ್ಜೆಗೇರಿದ ನಂತರ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಯು ಠಾಣೆಯ ಮುಖ್ಯಸ್ಥರಾಗಲಿದ್ದಾರೆ. ಇವರ ಅಧೀನ ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳು ಕಾರ್ಯನಿರ್ವಹಣೆ ಮಾಡಲಿದ್ದಾರೆ. ಕಮಿಷನರೇಟ್ ವ್ಯವಸ್ಥೆಯಿರುವ ನಗರಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ಈ ವ್ಯವಸ್ಥೆಯಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ನಗರದ ಇತರೆ ಪೊಲೀಸ್ ಠಾಣೆಗಳಿಗೆ ಹೋಲಿಕೆ ಮಾಡಿದರೆ ಈ ಮೂರು ಪೊಲೀಸ್ ಠಾಣೆಗಳು ವಿಶಾಲ ವ್ಯಾಪ್ತಿ, ಕಾರ್ಯಬಾಹುಳ್ಯ ಮತ್ತು ಕರ್ತವ್ಯ ಒತ್ತಡವಿರುವ ಠಾಣೆಗಳಾಗಿವೆ. ಅತಿ ಹೆಚ್ಚು ಸಂಖ್ಯೆಯ ದೂರುಗಳು ದಾಖಲಾಗುತ್ತಿವೆ. ಪ್ರಸ್ತುತ ಈ ಠಾಣೆಗಳನ್ನು ಮೇಲ್ದರ್ಜೆಗೇರಿಸುತ್ತಿರುವುದರಿಂದ ಅಧಿಕಾರಿ, ಸಿಬ್ಬಂದಿಯ ಸಂಖ್ಯೆ ಹೆಚ್ಚಾಗಲಿದ್ದು, ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂಬುದು ಸ್ಥಳೀಯ ಪೊಲೀಸರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News