×
Ad

ಮೆಹ್ರಮ್ ಕೋಟಾದಡಿಯಲ್ಲಿ 200 ಸೀಟು ಲಭ್ಯ

Update: 2016-04-22 22:56 IST

ಬೆಂಗಳೂರು, ಎ.22: ಭಾರತದ ವಿದೇಶಾಂಗ ಸಚಿವಾಲಯವು ಕೇಂದ್ರೀಯ ಹಜ್ ಸಮಿತಿಗೆ ಮೆಹ್ರಮ್ ಕೋಟಾ(ಸಂಗಾತಿ)ದಡಿಯಲ್ಲಿ 200 ಹಜ್ ಸೀಟುಗಳನ್ನು ಸೌದಿ ಅರೇಬಿಯಾ ಸರಕಾರದ ನಿಯಮಾವಳಿಗಳ ಅನ್ವಯ ಹಂಚಿಕೆ ಮಾಡುವಂತೆ ನೀಡಿದೆ.
ಹಜ್‌ಯಾತ್ರೆಗೆ ತೆರಳುವ ಮಹಿಳೆ ಶರಿಯಾ ಕಾನೂನಿನ್ವಯ ತನ್ನ ಸಂಗಾತಿಯೊಂದಿಗೆ ಮಾತ್ರ ತೆರಳಬೇಕು. ಅರ್ಹ ಯಾತ್ರಿಗಳಿಗೆ ಈ ಸೀಟುಗಳನ್ನು ಹಂಚಿಕೆ ಮಾಡುವಂತೆ ಕೇಂದ್ರೀಯ ಹಜ್ ಸಮಿತಿಗೆ ಭಾರತ ಸರಕಾರವು ನಿರ್ದೇಶನ ನೀಡಿದೆ.
ಮೆಹ್ರಮ್ ಕೋಟಾದಡಿಯಲ್ಲಿ ಮಹಿಳೆಯೊಂದಿಗೆ ಪ್ರಯಾಣಿಸುವ ಸಂಗಾತಿಯು ಹಜ್‌ಯಾತ್ರೆಯ ಅರ್ಜಿಯೊಂದಿಗೆ 2016ನೆ ಸಾಲಿನ ಹಜ್‌ಯಾತ್ರೆಗೆ ಅರ್ಜಿ ಸಲ್ಲಿಸದಿರಲು ಕಾರಣವನ್ನು ತಿಳಿಸಬೇಕು. ಮಹಿಳಾ ಅರ್ಜಿದಾರರೊಂದಿಗೆ ಸಂಗಾತಿಗೆ ಇರುವ ಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿದಾರ ಮಹಿಳೆಯು ಇದೇ ವ್ಯಕ್ತಿಯನ್ನು ಯಾತ್ರೆಗಾಗಿ ತನ್ನ ಸಂಗಾತಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕಾರಣ ನೀಡಬೇಕು. ಅಲ್ಲದೆ, ಮುಂಬರುವ ವರ್ಷಗಳಲ್ಲಿ ಅರ್ಜಿದಾರ ಮಹಿಳೆ ಹಜ್‌ಯಾತ್ರೆ ಕೈಗೊಳ್ಳಲು ಯಾಕೆ ಸಾಧ್ಯವಾಗುವುದಿಲ್ಲ ಎಂಬ ಕಾರಣಗಳನ್ನು ನೀಡಬೇಕು.
ಮಹಿಳಾ ಅರ್ಜಿದಾರರ ವಯಸ್ಸು, ಶರಿಯಾ ಕಾನೂನಿನಡಿಯಲ್ಲಿರುವ ಮೆಹ್ರಮ್(ಸಂಗಾತಿ)ಗಳು ಕುಟುಂಬದಲ್ಲಿ ಯಾರ್ಯಾರು ಇದ್ದಾರೆ ಎಂಬುದನ್ನು ತಿಳಿಸಬೇಕು. ಭಾರತೀಯ ಹಜ್ ಸಮಿತಿಯು ಅರ್ಜಿಗಳನ್ನು ಸ್ವೀಕರಿಸಿ ಜೇಷ್ಠತೆಯ ಆಧಾರದಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಿದೆ. ಲಾಟರಿ ಮೂಲಕವೆ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಮೆಹ್ರಮ್ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಲು ಮೇ 23 ಅಂತಿಮ ದಿನವಾಗಿದ್ದು, ಕಚೇರಿಯ ಕೆಲಸದ ಅವಧಿ(ಬೆಳಗ್ಗೆ 10:30ರಿಂದ ಸಂಜೆ 5ರವರೆಗೆ)ಯೊಳಗೆ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ರಾಜ್ಯ ಹಜ್ ಸಮಿತಿ ಕಚೇರಿಗೆ ಅರ್ಜಿಗಳನ್ನು ತಲುಪಿಸಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ಖಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮುಂಗಡ ಹಣ ಪಾವತಿ ಅವಧಿ ವಿಸ್ತರಣೆ:
ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಗಳು ಮುಂಗಡ ಹಣ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಎ.23ರ ಗಡುವನ್ನು ಎ.30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಭಾರತೀಯ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅತಾವುರ್ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News