×
Ad

1500 ಸಹ ಪ್ರಾಧ್ಯಾಪಕರ ನೇಮಕದಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ: ಸಚಿವ ಟಿ.ಬಿ.ಜಯಚಂದ್ರ

Update: 2016-04-22 22:57 IST

ಬೆಂಗಳೂರು, ಎ. 22: ಪದವಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ನೀಗಿಸಲು ಶೀಘ್ರದಲ್ಲೆ 1,500 ಮಂದಿ ಸಹ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ವೇಳೆ ಸೇವಾ ಹಿರಿತನ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ವಯೋಮಿತಿ ರಿಯಾಯಿತಿ ನೀಡಿ ನೇಮಕಾತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
 ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 2,160 ಸಹ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ ಹತ್ತು-ಹದಿನೈದು ದಿನಗಳಲ್ಲಿ ಅವರಿಗೆ ನೇಮಕಾತಿ ಆದೇಶ ನೀಡಲಾಗುವುದು. ಆ ಬಳಿಕ ಮಂಜೂರಾದ ಹುದ್ದೆಗಳ ಪೈಕಿ 468 ಸಹ ಪ್ರಾಧ್ಯಾಪಕರ ಹುದ್ದೆ ಖಾಲಿ ಇರುತ್ತವೆ.
ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾಧ್ಯಾಪಕರ ಹೊಸ ಹುದ್ದೆ ಸೃಷ್ಟಿಸಿಲ್ಲ. ಆ ಹಿನ್ನೆಲೆಯಲ್ಲಿ ಹೊಸದಾಗಿ 1,500 ಸಹ ಪ್ರಾಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆ ವೇಳೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ರಸ್ತುತ 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಿದ್ದು, ಹತ್ತು-ಹದಿನೈದು ವರ್ಷ ಸೇವಾ ಹಿರಿತನ ಹೊಂದಿರುವವರು ಹೆಚ್ಚಿದ್ದಾರೆ. ಆ ಪೈಕಿ ‘ಪಿಎಚ್‌ಡಿ, ನೆಟ್, ಸ್ಲೆಟ್’ ಆಗಿರುವವರಿಗೆ ಹೊಸ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲ ವಿವಿಗಳಿಗೆ ಏಕರೂಪ ನೀತಿ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೇ.50ರಷ್ಟು ಮಕ್ಕಳ ಉನ್ನತ ಶಿಕ್ಷಣಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಹಾಗೂ ಶೈಕ್ಷಣಿಕ ಶಿಸ್ತು ರೂಪಿಸುವ ದೃಷ್ಟಿಯಿಂದ ಎಲ್ಲ ವಿವಿಗಳಿಗೂ ಏಕರೂಪ ನೀತಿಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಜಯಚಂದ್ರ ಹೇಳಿದರು.
ರಾಜ್ಯದಲ್ಲಿ ಸರಕಾರಿ ವಿಶ್ವ ವಿದ್ಯಾನಿಲಯ ಕಾರ್ಯ ನಿರ್ವಹಣೆ ಕಾಯ್ದೆಯಿದ್ದು, ಒಂದೊಂದು ವಿವಿಯೂ ತನ್ನದೇ ಆದ ನಿಯಮ ರೂಪಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಎಲ್ಲ ವಿವಿಗಳಿಗೂ ಏಕರೂಪ ನೀತಿ ರೂಪಿಸುವ ಅಗತ್ಯವಿದೆ ಎಂದು ಜಯಚಂದ್ರ ಪ್ರತಿಪಾದಿಸಿದರು.
ರಾಜ್ಯದಲ್ಲಿ ಒಟ್ಟು 50 ವಿಶ್ವ ವಿದ್ಯಾನಿಲಯಗಳಿದ್ದು, ಶೇ.24ರಷ್ಟು ವಿದ್ಯಾರ್ಥಿಗಳಷ್ಟೇ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ 2020ರ ವೇಳೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಅವರು ಕೋರಿದರು.

ಆವಿಷ್ಕಾರಗಳ ಅನುಷ್ಠಾನ: ತಮ್ಮ ಅಧ್ಯಕ್ಷತೆಯಲ್ಲಿನ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಎಲ್ಲ ವಿಶ್ವ ವಿದ್ಯಾನಿಲಯಗಳ ಕುಲಪತಿಗಳಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಯಚಂದ್ರ ಇದೇ ವೇಳೆ ತಿಳಿಸಿದರು. ಬೆಂಗಳೂರು ವಿಶ್ವ ವಿದ್ಯಾನಿಲಯ ಆವರಣದಲ್ಲಿ ಉನ್ನತ ಶಿಕ್ಷಣ ಪರಿಷತ್‌ಗೆ ಸುಸಜ್ಜಿತ ಕಟ್ಟಡವನ್ನು ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಲಾಗಿದೆ ಎಂದ ಅವರು, ಶೀಘ್ರದಲ್ಲೆ ಉನ್ನತ ಶಿಕ್ಷಣ ಪರಿಷತ್ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ನುಡಿದರು.

ಕಾನೂನಿನ ಅನ್ವಯ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತಿದ್ದು, ಬಿಎಸ್‌ವೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗುವ ಮೊದಲೇ ಮೇಲ್ಮನವಿಗೆ ತೀರ್ಮಾನಿಸಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ.
-ಟಿ.ಬಿ.ಜಯಚಂದ್ರ,ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News