ಆತ್ಮಹತ್ಯೆಗೆ ಯತ್ನಿಸಿದ್ದ ರೈತನ ಸಾವು
ಬೆಂಗಳೂರು, ಎ. 22: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ರೈತ ಆನಂದಕುಮಾರ್ (30) ಇಂದು ಸಾವನ್ನಪ್ಪಿದ್ದಾರೆ. ಮೂವತ್ತು ವರ್ಷಗಳಿಂದ ಸ್ವಾಧೀನದಲ್ಲಿದ್ದ ಭೂಮಿಗೆ ಸಾಗುವಳಿ ಚೀಟಿ ನೀಡುವ ವಿಚಾರದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದ ರೈತ ಆನಂದ ಮೂರು ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಆನಂದನನ್ನು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಇಂದು ಕೊನೆಯುಸಿರೆಳೆದಿದ್ದಾರೆ. ಪರಿಹಾರಕ್ಕೆ ಆಗ್ರಹ: ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ರೈತ ಆನಂದ್ ಪಾರ್ಥಿವ ಶರೀರದ ದರ್ಶನ ಪಡೆದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಮೃತನ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ ಅವರು, ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು. ಮೃತನ ಪಾರ್ಥಿವ ಶರೀರ ಚಿಕ್ಕಬಳ್ಳಾಪುರಕ್ಕೆ ತಲುಪಿದ ನಂತರ ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟದ ರೂಪುರೇಷೆ ಹೆಣೆಯುತ್ತೇವೆ ಎಂದರು.