ಸಚಿವ ಚಿಂಚನಸೂರ್ ವಿರುದ್ಧ ತನಿಖೆಗೆ ಲೋಕಾಯುಕ್ತ ಆದೇಶ
Update: 2016-04-22 23:03 IST
ಬೆಂಗಳೂರು, ಎ.22: ಸಚಿವ ಬಾಬೂರಾವ್ ಚಿಂಚನಸೂರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶ ಹೊರಡಿಸಿದೆ.
ಈ ಸಂಬಂಧ ಶಾಂತಪ್ಪ ಎಂಬವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. 1998 ರಿಂದ 2004ರ ಅವಧಿಯಲ್ಲಿ ಸಚಿವರಾಗಿದ್ದ ಚಿಂಚನಸೂರ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಮಾಡಿಕೊಂಡಿದ್ದಾರೆ ಎಂದು 2012ರಲ್ಲಿ ಬಾಬೂರಾವ್ ಚಿಂಚನಸೂರ್ ವಿರುದ್ಧ ಖಾಸಗಿ ದೂರು ಸಲ್ಲಿಕೆಯಾಗಿತ್ತು. ಆದರೆ, ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿತ್ತು. ಹಾಗೂ ದೂರನ್ನು ಪುನರ್ ಪರಿಶೀಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಶುಕ್ರವಾರ ಪ್ರಕರಣದ ಪುನರ್ ಪರಿಶೀಲನೆ ನಡೆಸಿದ ನ್ಯಾಯಾಲಯ ಸಚಿವರ ವಿರುದ್ಧ ತನಿಖೆಗೆ ಆದೇಶಿಸಿತು.