×
Ad

ಬಿಬಿಎಂಪಿ ವಿಭಜನೆ ಸಂಬಂಧ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ : ಕೆ.ಜೆ.ಜಾರ್ಜ್

Update: 2016-04-23 17:02 IST

ಬೆಂಗಳೂರು.ಏ.23:ಬಿಬಿಎಂಪಿ ವಿಭಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಪಾಲಿಕೆ ವಿಭಜನೆಗೆ ಸಂಬಂಧಿಸಿದಂತೆ ಬಿಎಸ್ ಪಾಟೀಲ್ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಇಂದಿಲ್ಲಿ ಹೇಳಿದರು.

ಬಿಬಿಎಂಪಿಯಲ್ಲಿ ಜೆಡಿಎಸ್ ಬೆಂಬಲ ವಾಪಸ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿ, ಬಿಬಿಎಂಪಿಯಲ್ಲಿ ಒಳ್ಳೆಯ ಆಡಳಿತ ನಡೆಯುತ್ತಿದೆ. ಬಿಬಿಎಂಪಿ ಮೈತ್ರಿಗೆ ಯಾವುದೇ ಭಂಗ ಬಂದಿಲ್ಲ ಎಂದರು.

ಬಿಬಿಎಂಪಿ ನೂತನ ಆಯುಕ್ತರನ್ನಾಗಿ ಮಂಜುನಾಥ್ ಪ್ರಸಾದ್ ನೇಮಕವನ್ನು ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ. ಇವರ ಮೇಲೆ ಯಾವುದೇ ಆರೋಪ ಸಾಬೀತಾಗಿಲ್ಲ. ಮಹೇಂದ್ರ ಜೈನ್ ಮೇಲೆಯೂ ಯಾವುದೇ ಆರೋಪ ಸಾಬೀತಾಗಿಲ್ಲ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳಪೆ ರಸ್ತೆ ಕಾಮಗಾರಿ ವಿಚಾರ ಸಂಬಂಧ ಈಗಾಗಲೇ 2 ವರದಿ ಬಂದಿದೆ. ನಿವೃತ್ತ ನ್ಯಾಯಮೂರ್ತಿ ಮತ್ತು ಲೋಕೋಪಯೋಗಿ ಇಲಾಖೆಯ ಮೂವರು ನಿವೃತ್ತ ಎಂಜಿನಿಯರ್ ಸಮಿತಿ ರಚನೆ ಮಾಡಲಾಗಿದೆ. ತನಿಖೆಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಮುಕ್ತ ಮಾಡುವ ಹೇಳಿಕೆ ನೀಡಿದ್ದಾರೆ. ಆದರೆ ಅವರಿಂದ ಅದು ಅಸಾಧ್ಯ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಒಂದೂವರೆ ಶತಮಾನದ ಇತಿಹಾಸವಿದೆ. ಯಾರಿಂದಲೂ ಕಾಂಗ್ರೆಸ್ ನಾಶ ಮಾಡಲು ಸಾಧ್ಯವಿಲ್ಲ ಎಂದು ಜಾರ್ಜ್ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News