ಜಪಾನಿ ಭಾಷೆ ಕಲಿತ, ರಾಜ್ಯದ ಪದವೀಧರರಿಗೆ ಜಪಾನಿನಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶ
ಬೆಂಗಳೂರು.ಏ.22: ಯುವ ಜನಾಂಗದ ಕೊರತೆಯಿಂದ ತತ್ತರಿಸುತ್ತಿರುವ ವಿಶ್ವದ ಪ್ರಬಲ ದೇಶಗಳಲ್ಲೊಂದಾದ ಜಪಾನ್ ಇದೀಗ ಸರಳ ಜಪಾನಿ ಭಾಷೆ ಕಲಿತ ರಾಜ್ಯದ ಯುವಕ ಯುವತಿಯರಿಗೆ ಭಾರೀ ಉದ್ಯೋಗ ಅವಕಾಶ ಕಲ್ಪಿಸುವುದಾಗಿ ಆಹ್ವಾನ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಇಂದಿಲ್ಲಿ ತಿಳಿಸಿದರು.
ಇದಕ್ಕಾಗಿ ಉದ್ಯೋಗ ಆಧಾರಿತ ಶಿಕ್ಷಣ ನೀಡಲು ಆದ್ಯತೆ ಕೊಡಲಾಗಿದೆ. ವಿಶೇಷವಾಗಿ ಪದವೀಧರರಿಗೆ ಜಪಾನ್ ಭಾಷೆ ಕಲಿಸಲು ನಿರ್ಧರಿಸಲಾಗಿದೆ ಎಂದರು.
ಜಪಾನ್ ಸರ್ಕಾರದ ಪರವಾಗಿ ಅಲ್ಲಿನ ಉದ್ಯಮಿಗಳ ನಿಯೋಗದ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿ, ಕೈತುಂಬ ಸಂಬಳ ನೀಡುವುದಾಗಿ ತಿಳಿಸಿದ್ದಾರೆ.
40 ಸಾವಿರ ಇಂಜಿನಿಯರ್ ಪದವಿಧರರು, 4 ಲಕ್ಷ ನರ್ಸಿಂಗ್ ಹಾಗೂ ಕೌಶಲ್ಯಾಧಾರಿತ ತರಬೇತಿ ಪಡೆದವರಿಗೆ ಭಾರೀ ಪ್ರಮಾಣದಲ್ಲಿ ಉದ್ಯೋಗ ಅವಕಾಶವಿದೆ. ಕನಿಷ್ಠ 2.50 ಲಕ್ಷ ರೂ. ಮಾಸಿಕ ವೇತನ ದೊರೆಯಲಿದ್ದು, ಯುವಕರು ಪದವಿ ಜೊತೆಗೆ ಕನಿಷ್ಠ ಸರಳವಾಗಿ ಜಪಾನ್ ಭಾಷೆ ಕಲಿತಿದ್ದರೆ, ಅಂತಹವರಿಗೆ ತಕ್ಷಣವೇ ಉದ್ಯೋಗ ನೀಡಲಾಗುವುದು.
ನಮ್ಮ ಸರ್ಕಾರ ಭಾರತ ಮತ್ತು ವಿಯಟ್ನಾಂ ರಾಷ್ಟ್ರಗಳ ನಿರುದ್ಯೋಗಿ ಯುವಕ ಯುವತಿಯರಿಗೆ ಕೆಲಸ ಕೊಡಬೇಕೆಂಬ ತೀರ್ಮಾನ ಕೈಗೊಂಡಿದೆ. ಈ ರಾಷ್ಟ್ರದಿಂದ ಬರುವ ಪದವೀಧರರಿಗೆ ಮತ್ತು ಕೌಶಲ್ಯಾಧಾರಿತ ತರಬೇತಿ ಪಡೆದವರಿಗೆ ಎರಡು ಮೂರು ದಿನದಲ್ಲೇ ವೀಸಾ ನೀಡಲು ಸರಳ ಕಾನೂನನ್ನು ಜಾರಿಗೆ ತಂದಿದೆ.
ಜಪಾನ್ ನಿಯೋಗದ ಜೊತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ ನಮ್ಮ ನಿರುದ್ಯೋಗಿಗಳಿಗೆ ಆ ದೇಶದಲ್ಲಿ ಉದ್ಯೋಗ ಕಲ್ಪಿಸಲು ಜಪಾನ್ ಭಾಷೆ ಕಲಿಕೆಗೆ ಕೇಂದ್ರಗಳನ್ನು ತೆರೆಯಲಾಗುವುದು.
ವಿಶ್ವವಿದ್ಯಾನಿಲಯ ಮಟ್ಟದಲ್ಲೇ ಕಲಿಕಾ ಕೇಂದ್ರಗಳನ್ನು ತೆರೆಯುವ ಸಂಬಂಧ ಮೇ 3 ರಂದು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಸಭೆ ಕರೆಯಲಾಗಿದೆ.
ಆ ಸಭೆಯಲ್ಲಿ ಈ ನಿಯೋಗದವರು ಹಾಜರಿದ್ದು, ತಮ್ಮ ರಾಷ್ಟ್ರದ ನೀತಿ ನಿರ್ಧಾರಗಳನ್ನು ತಿಳಿಸುವುದಲ್ಲದೆ, ಜಪಾನ್ ಭಾಷೆ ಕಲಿಕೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಿದ್ದಾರೆ.
ಜಪಾನ್ ಎಲೆಕ್ಟ್ರಿಕ್ ಮತ್ತು ಆಟೋಮೋಬೈಲ್‌ನಲ್ಲಿ ದಾಪುಗಾಲಿಟ್ಟಿದೆ. ಇದೀಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ತಮ್ಮ ಹಸ್ತ ಚಾಚಲು ಮುಂದಾಗಿದೆ.
ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಶಿಕ್ಷಣ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ಉದ್ಯೋಗವನ್ನು ಜಪಾನ್ ಕಲ್ಪಿಸುವುದಾಗಿ ತಿಳಿಸಿದೆ.
ಜಪಾನ್‌ನಲ್ಲಿ ವಯೋವೃದ್ಧರು ಹೆಚ್ಚಾಗಿದ್ದು, ಅವರನ್ನು ನೋಡಿಕೊಳ್ಳಲು ಯುವಪಡೆಯ ಕೊರತೆ ಇದೆ.ಇದಕ್ಕಾಗಿ ನಾಲ್ಕು ಲಕ್ಷ ನರ್ಸಿಂಗ್ ತರಬೇತಿ ಪಡೆದವರಿಗೆ ಉದ್ಯೋಗ ದೊರೆಯಲಿದೆ.
ಆದರೆ ಜಪಾನಿ ಭಾಷೆಯನ್ನು ಕನಿಷ್ಠ ಮಟ್ಟದಲ್ಲಾದರೂ ಕಲಿಕೆ ಮಾಡಿರಬೇಕು. ಭಾಷೆ ಅರಿತವರು ಆ ದೇಶಕ್ಕೆ ತೆರಳಿದರೆ ತಕ್ಷಣವೇ ಅವರ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ದೊರೆಯಲಿದೆ.
ಒಂದು ವೇಳೆ ಉದ್ಯೋಗ ಮಾಡಿಕೊಂಡೇ ವ್ಯಾಸಂಗ ಮಾಡಲು ಅವಕಾಶವಿದ್ದು, ಇಂತಹ ಸಂದರ್ಭದಲ್ಲಿ ಪ್ರತಿಗಂಟೆಗೆ 7 ಡಾಲರ್ ನೀಡಲು ಆ ಸರ್ಕಾರ ತೀರ್ಮಾನಿಸಿದೆ ಎಂದರು.