ದಲಿತ ಸಂಘಟನೆಗಳನ್ನು ಒಂದುಗೂಡಿಸುವ ಕೆಲಸವಾಗಲಿ: ಸಾಹಿತಿ ಜಗದೇವಿಗಾಯಕ್‌ವಾಡ್
ಚಿಕ್ಕಮಗಳೂರು, ಎ.23: ಒಂದು ದಿನಮಾ ನದಲ್ಲಿ ಸರಕಾರಗಳನ್ನೇ ತಮ್ಮ ಶಕ್ತಿಯ ಮೂಲಕ ಬುಡಮೇಲು ಮಾಡುತ್ತಿದ್ದ ದಲಿತ ಸಂಘಟನೆಗಳು ವಿಘಟನೆಗೊಂಡು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅವುಗಳನ್ನು ಒಂದುಗೂಡಿಸುವ ಕೆಲಸವಾಗಬೇಕು ಎಂದು ಹುಮ್ನಾಬಾದ್‌ನ ಸಾಹಿತಿ ಜಗದೇವಿಗಾಯಕ್‌ವಾಡ್ ಹೇಳಿದ್ದಾರೆ.
ಅವರು ಶನಿವಾರ ನಗರದ ಆಝಾದ್‌ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್‌ರವರ 125ನೆ ಜಯಂತಿ ಮತ್ತು ಶೋಷಿತರ ಜಾಗೃತಿ ದಿನದ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಮೂಢನಂಬಿಕೆ ಕಂದಾಚಾರಗಳ ವಿರುದ್ಧ ದಲಿತ ಸಮೂಹ ಜಾಗೃತಿಗೊಳ್ಳಬೇಕಿದೆ ಈ ಬಗ್ಗೆ ಸಂಘಟನೆಗಳು ಜನತೆಗೆ ಜಾಗೃತಿ ಮೂಡಿಸಲು ಮುಂದಾಗಬೇಕಿದೆಎಂದು ತಿಳಿಸಿದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ದೇಶದ ಎಲ್ಲಾ ವರ್ಗದ ಜನ ವಿದ್ಯಾರ್ಥಿ ವೇತನ, ಮೀಸಲಾತಿ, ಬಹುಪತ್ನಿತ್ವ ವಿರೊಧಿ ಕಾನೂನು ಅದು ಅಂಬೇಡ್ಕರ್‌ರವರ ಕೊಡುಗೆ ಎಂದು ಹೇಳಿದರು.
ಪತ್ರಕರ್ತ ಸತೀಶ್‌ಕುಮಾರ್ ಮಾತನಾಡಿ, ಕೋಮುವಾದಿಗಳು ಅಂಬೇಡ್ಕರವರ ಆಳೆತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಅಂಬೇಡ್ಕರ್‌ರವರ ಆರಾಧಕರ ಮಧ್ಯದಲ್ಲಿ ಹುಸಿ ಆರಾಧಕರು ರಾರಾಜಿಸುತ್ತಿದ್ದಾರೆ ಎಂದು ಹರಿಹಾಯ್ದರು.
ದೇಶದಲ್ಲಿ ಹಿಂದೂ ವಾದವನ್ನು ಬಿತ್ತಿ ದಲಿತರನ್ನು ಅಸ್ತ್ರವನ್ನಾಗಿಸಿಕೊಂಡು ರಾಜಕೀಯ ಲಾಭಗಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅಂಬೇಡ್ಕರ್‌ರವರನ್ನು ತೆಗಳುತ್ತಿದ್ದವರು ಇಂದು ಅವರನ್ನು ಹೊಗಳುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಡಿಎಸ್ಸೆಸ್ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಮಾನವಬಂಧುತ್ವ ವೇದಿಕೆಯ ರವಿನಾಯಕರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಎ.ಎನ್.ಮಹೇಶ್, ರೈತ ಮುಖಂಡರಾದ ಗುರುಶಾಂತಪ್ಪ, ರವೀಶ್, ಸಿಪಿಐನ ಮುಖಂಡ ಬಿ.ಅಮ್ಜದ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿ.ಪಿ ನಾರಾಯಣ್, ತರೀಕೆರೆ ತಾಲೂಕು ಕಸಾಪ ಅಧ್ಯಕ್ಷ ದಾದಾಫೀರ್, ಡಿಎಸ್ಸೆಸ್ ಮುಖಂಡರಾದ ರಾಜರತ್ನಂ, ಅಂಗಡಿಚಂದ್ರು, ಮಂಜುನಾಥ್, ಯಲಗುಡಿಗೆ ಹೊನ್ನಪ್ಪ ಉಪಸ್ಥಿತರಿದ್ದರು.