×
Ad

ಶಿವಮೊಗ್ಗ: ಭರ್ತಿಯಾಗದ ವೈದ್ಯರ ಹುದ್ದೆ

Update: 2016-04-23 22:02 IST

 ಶಿವಮೊಗ್ಗ, ಎ. 23: ರಾಜ್ಯದಲ್ಲಿ ಖಾಲಿಯಿರುವ ವೈದ್ಯರ ಹುದ್ದೆ ಭರ್ತಿಯಾಗುವವರೆಗೂ ವರ್ಷಕ್ಕೆ ಎರಡು ಬಾರಿ ನೇಮಕಾತಿ ಪ್ರಕ್ರಿಯೆ ನಡೆಸಲು ಚಿಂತಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಕಳೆದ 10 ವರ್ಷದಿಂದ ಖಾಲಿ ಇದ್ದ ಸರಕಾರಿ ವೈದ್ಯರ ಹುದ್ದೆಗೆ ಕೆಪಿಎಸ್ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ ವರ್ಷ 973 ವೈದ್ಯರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಇದರಲ್ಲಿ ಇನ್ನೂ 374 ಹುದ್ದೆಗಳು ಭರ್ತಿಯಾಗಿಲ್ಲ. ನೇಮಕವಾದವರಲ್ಲಿ ಬಹುತೇಕರು ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನೂ 321 ಹುದ್ದೆಗೆ ವೈದ್ಯರು ಬಂದಿಲ್ಲ. ಇದಕ್ಕೆ ಮತ್ತೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ತಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.

243 ಎಂಬಿಬಿಎಸ್ ಪದವೀಧರರು ಕೆಲಸಕ್ಕೆ ಸೇರಿದ್ದಾರೆ. ಚಿಕ್ಕಮಗಳೂರು, ಗದಗ ಮೊದಲಾದ ಜಿಲ್ಲೆಗಳಲ್ಲಿ ವೈದ್ಯರ ಕೊರತೆ ಇದೆ. ಆ ಜಿಲ್ಲೆಗಳಿಗೆ ನೇಮಕವಾದ ವೈದ್ಯರು ಆ ಸ್ಥಾನಕ್ಕೆ ತೆರಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವೇಳೆ ಅವರು ಕರ್ತವ್ಯಕ್ಕೆ ಬಾರದಿದ್ದಲ್ಲಿ ಮತ್ತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನಕಲಿ ವೈದ್ಯರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಬೇಕು. ಅಧಿಕಾರಿಗಳಿಗಿಂತ ಹೆಚ್ಚಾಗಿ ಜನರಿಗೆ ಇಂತವರ ಬಗ್ಗೆ ಮಾಹಿತಿ ಇರುತ್ತದೆ. ಇತ್ತೀಚೆಗೆ ಜಿಲ್ಲಾ ಆಯುಷ್ ಅಧಿಕಾರಿ ಮುಹಮ್ಮದ್ ಹುಸೈನ್, ಮೇಲಧಿಕಾರಿಗಳ ಒತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವುದರ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.  ಆ ಸಮಿತಿ ವರದಿ ನೀಡಿದ ನಂತರ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

 ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಉಪಸ್ಥಿತರಿದ್ದರು.

ಧರಣಿಗೂ ಸರಕಾರಕ್ಕೂ ಸಂಬಂಧವಿಲ್ಲ: ಜಿವಿಕೆ ಕಂಪೆನಿಗೆ ಗುತ್ತಿಗೆ ನೀಡಲಾಗಿರುವ 108 ಆ್ಯಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆ ಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸರಕಾರವು 10 ವರ್ಷಗಳ ಮಟ್ಟಿಗೆ 2008 ರಲ್ಲಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಪ್ರಕಾರ ಸೇವೆ ಪಡೆಯುವುದಷ್ಟೇ ಸರಕಾರದ ಕೆಲಸ.

ಸಿಬ್ಬಂದಿ ನೇಮಕ, ವೇತನ, ವಾಹನ ನಿರ್ವಹಣೆ ಮೊದಲಾದವು ಕಂಪೆನಿಯ ವಿಚಾರ. ರಾಜ್ಯದಲ್ಲಿ 719 ಆ್ಯಂಬುಲೆನ್ಸ್‌ಗಳನ್ನು ಈ ಕಂಪೆನಿಯಿಂದ ಪಡೆಯಲಾಗಿದೆ. ಪ್ರತಿ ಆ್ಯಂಬುಲೆನ್ಸ್ ಗೆ ತಿಂಗಳಿಗೆ 1.20 ಲಕ್ಷ ರೂ. ಪಾವತಿಸಲಾಗುತ್ತಿದೆ.

ನಿರೀಕ್ಷಿತ ಮಟ್ಟದಲ್ಲಿ ಹುದ್ದೆ ಭರ್ತಿಯಾಗುತ್ತಿಲ್ಲ: ಗುತ್ತಿಗೆ ಆಧಾರದ ಮೇಲೆ ನೇಮಕವಾದವರಿಗೆ 46 ಸಾವಿರ ರೂ., ಎಂಬಿಬಿಎಸ್ ಆದವರಿಗೆ 80 ಸಾವಿರ ರೂ. ವೇತನ ನೀಡಲಾಗುತ್ತಿದೆ. ರಾಜ್ಯದಲ್ಲಿ ವೈದ್ಯರಿಗೆ ನೀಡುವಷ್ಟು ಸಂಬಳವನ್ನು ದೇಶದ ಯಾವುದೇ ರಾಜ್ಯಗಳಲ್ಲಿಯೂ ನೀಡುತ್ತಿಲ್ಲ. ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ವೈದ್ಯ ಹುದ್ದೆಗಳು ಭರ್ತಿಯಾಗುತ್ತಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News