×
Ad

ಶಿವಮೊಗ್ಗ: ದಾಂಪತ್ಯಕೆ್ಕ ಕಾಲಿಟ್ಟ 163 ಜೋಡಿಗಳು

Update: 2016-04-23 22:06 IST

 ಶಿವಮೊಗ್ಗ,ಎ.23: ಸಾಮೂಹಿಕ ಮದುವೆಗಳು ಬಡವರ ಪಾಲಿಗೆ ವರದಾನ ಎಂದು ಖಲಂದರಿಯ ಅಸೋಸಿಯೇಶನ್ ಮುಖ್ಯಸ್ಥ ಮುಹಮ್ಮದ್ ಅನ್ವರ್ ಖಾದ್ರಿ ಹೇಳಿದರು. ಶನಿವಾರ ಬೆಳಗ್ಗೆ ಖಲಂದರಿಯ ಅಸೋಸಿಯೇಶನ್ ನಗರದ ಊರುಗಡೂರು ಬಡಾವಣೆಯ ಮತ್ತೂರು ರಸ್ತೆಯ ಸಮೀಪ ಆಯೋಜಿಸಿದ್ದ ಬೃಹತ್ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸೈಯದ್ ಶಾ ಮುಹಮ್ಮದ್ ಶಾ ಖಲಂದರ್ ಪೀರಾನ್ ವಲಿಯಲ್ಲಾ ಖಾದ್ರಿ ಜಾವಗಲ್ ಷರೀಫ್‌ರವರ, ಕೃಪೆ ಹಾಗೂ ಎಲ್ಲಾ ವಲಿಯುಲ್ಲಾಹ್‌ರವರ ಆಶೀರ್ವಾದದಿಂದ ಈ ಸಾಮೂಹಿಕ ವಿವಾಹ ಮಹೋತ್ಸವ ನಡೆಯುತ್ತಿದೆ. ದೇಶದಲ್ಲಿಯೇ ಇಂತಹ ಬಹುದೊಡ್ಡ ಮುಸ್ಲಿಮ್ ಸಾಮೂಹಿಕ ವಿವಾಹ ನಡೆಯುತ್ತಿರುವುದು ಇದೇ ಮೊದಲಾಗಿದೆ. ಸುಮಾರು 163 ಜೋಡಿಗಳು ದಾಂಪತ್ಯಕ್ಕೆ ಇಂದು ಕಾಲಿಟ್ಟಿದ್ದಾರೆ ಎಂದರು.

ಅತಿ ಕಡು ಬಡತನದಲ್ಲಿರುವವರಿಗೆ ಇಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಒಂದು ಸಂಸಾರಕ್ಕೆ ಬೇಕಾಗುವಷ್ಟು ವಸ್ತುಗಳನ್ನು ಉಡುಗೊರೆಯಾಗಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾದ ದಂಪತಿಗಳಿಗೆ ನೀಡಲಾಗುತ್ತಿದೆ ಎಂದರು.

ತಂದೆ-ತಾಯಿ ಇಲ್ಲದವರು, ಅನಾಥರು ಮತ್ತು ಬಡತನದವರು ರಾಜ್ಯದಲ್ಲಿ ಎಲ್ಲೇ ಇರಲಿ ಇಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಮದುವೆಯಾಗಬಹುದು. ಕಳೆದ ಸಲ 57 ಜೋಡಿ ವಿವಾಹಕ್ಕೆ ಕಾಲಿಟ್ಟಿದ್ದರು. ಅವರೆಲ್ಲರೂ ಇಂದು ಸುಖ ಸಂತೋಷದಿಂದ ಇದ್ದಾರೆ. ಈ ಬಾರಿ ಈ ಅವಕಾಶ 163 ಜನರಿಗೆ ಸಿಕ್ಕಿದೆ ಎಂದರು.

ಅತೀ ಬಡವರು ಈಗಿನ ಸಂದರ್ಭದಲ್ಲಿ ಮದುವೆಯಾಗುವುದೇ ದುಸ್ತರವಾಗಿಬಿಟ್ಟಿದೆ. ವಯಸ್ಸಿಗೆ ಬಂದ ಮಕ್ಕಳ ಮದುವೆ ಮಾಡುವುದು ಅದೆಷ್ಟೋ ಪೋಷಕರಿಗೆ ಕಷ್ಟವಾಗಿದೆ. ಈ ಪರಿಸ್ಥಿತಿಯನ್ನು ಅರಿತಿರುವ ಖಲಂದರಿಯ ಅಸೋಸಿಯೇಶನ್ ಕಳೆದ ವರ್ಷದಿಂದ ಅತೀ ಬಡತನದಲ್ಲಿರುವ ಜೋಡಿಗಳನ್ನು ಹುಡುಕಿ, ಅವರ ಪೋಷಕರ ಸ್ಥಿತಿಗತಿಯನ್ನು ಪರಿಶೀಲಿಸಿ ಈ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎನ್. ರಮೇಶ್, ಪ್ರಮುಖರಾದ ಮುಹಮ್ಮದ್ ಅನ್ವರ್ ಖಾದ್ರಿ, ಮುಹಮ್ಮದ್ ಶೌಕತ್ ಖಾದ್ರಿ, ಮುಹಮ್ಮದ್ ಖಲಂದರ್ ಖಾದ್ರಿ, ಮುಹಮ್ಮದ್ ನಸ್ರುಲ್ಲ ಖಾದ್ರಿ, ಮುಹಮ್ಮದ್ ನಿಜಾಮುಲ್ಲಾ ಖಾನ್ ಖಾದ್ರಿ, ಮುಕ್ತಿಯಾರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News