ಗ್ಯಾಟ್ ಒಪ್ಪಂದದಿಂದಾಗಿ ಶಿಕ್ಷಣದ ಖಾಸಗೀಕರಣ: ಡಾ.ಬಿಳಿಮಲೆ
ಬೆಂಗಳೂರು, ಎ.23: ಗ್ಯಾಟ್ ಒಪ್ಪಂದದಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಳ್ಳುತ್ತಿದ್ದು, ಇದರ ಪರಿಣಾಮ ಇನ್ನು ಹತ್ತು ವರ್ಷಗಳಲ್ಲಿ ಕನ್ನಡ, ತಮಿಳು, ತೆಲುಗು ಸೇರಿದಂತೆ ದೇಶಿಯ ಭಾಷೆಗಳು ನಿರ್ನಾಮವಾಗಲಿವೆ ಎಂದು ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ‘ಹೊಸತು’ ಪತ್ರಿಕೆ ಹಾಗೂ ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ ನಗರದ ಸರಕಾರಿ ಆರ್.ಸಿ.ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ‘ಉನ್ನತ ಶಿಕ್ಷಣದ ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ಯಾಟ್ ಒಪ್ಪಂದವು ಮುಂದುವರೆದ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್‌ನಂತಹ ದೇಶಗಳು ಭಾರತದಂತಹ ಅಭಿವೃದ್ಧಿ ಶೀಲ ದೇಶಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಕೋಟ್ಯಂತರ ರೂ. ಲಾಭ ಗಳಿಸುತ್ತಿವೆ. ಇದರ ಜೊತೆಗೆ ಭಾರತದಲ್ಲಿರುವ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡುತ್ತಿವೆ ಎಂದು ಅವರು ತಿಳಿಸಿದರು.
ಮುಂದುವರಿದ ದೇಶಗಳು ಶಿಕ್ಷಣವನ್ನು ಹಣ ಮಾಡುವ ದೊಡ್ಡ ಮಾರುಕಟ್ಟೆಗಳನ್ನಾಗಿಸಿಕೊಂಡಿವೆ. ಅಮೆರಿಕಕ್ಕೆ 2013-14ನೆ ಸಾಲಿನಲ್ಲಿ ಇತರೆ ದೇಶಗಳಿಂದ ಸುಮಾರು 11ಲಕ್ಷದ 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ತೆರಳಿದ್ದರು. ಇದರಿಂದ ಆ ದೇಶಕ್ಕೆ 25 ಬಿಲಿಯನ್ ಡಾಲರ್ ಲಾಭವಾಗಿದೆ. ಅದೇ ರೀತಿಯಲ್ಲಿಯೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಶಿಕ್ಷಣ ಕ್ಷೇತ್ರದಿಂದಲೆ ಸಾವಿರಾರು ಕೋಟಿ ರೂ.ಲಾಭ ಗಳಿಸಿವೆ ಎಂದು ಅವರು ಹೇಳಿದರು.
ಭಾರತದ ಪ್ರಾದೇಶಿಕ ಭಾಷೆಗಳು ನಿರ್ನಾಮ ಹಂತದಲ್ಲಿವೆ ಎನ್ನುವುದಕ್ಕೆ ಕಾರಣಗಳನ್ನು ಕೊಡಬಹುದು. ಮೊದಲನೆಯದಾಗಿ 2020ರೊಳಗೆ ದೇಶದಲ್ಲಿ ಸುಮಾರು 400 ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಳ್ಳುತ್ತವೆ. ಇದರ ಬೆನ್ನೆಲ್ಲೆ ನಮ್ಮ ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಕೊಡುತ್ತಿರುವ ಅನುದಾನಗಳು ಸಾಕಷ್ಟು ಕಡಿಮೆಯಾಗುತ್ತಿದೆ. ಪ್ರಸ್ತುತ ದೇಶದಲ್ಲಿರುವ ಯಾವ ವಿಶ್ವವಿದ್ಯಾನಿಲಯವು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ನಮ್ಮನ್ನಾಳುವ ಸರಕಾರದ ಸ್ವಾರ್ಥ ಹಾಗೂ ನಿರಾಸಕ್ತಿಯ ಪರಿಣಾಮವಾಗಿ ಪ್ರಾದೇಶಿಕ ಭಾಷೆಗಳು ನಮ್ಮೆದುರೆ ಇಲ್ಲವಾಗುವ ಅಪಾಯವನ್ನು ಎದುರಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣದಲ್ಲಿ ದಲಿತ ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಶೇ.1ರಷ್ಟು ಇಲ್ಲ. ಅಲ್ಲೆಲ್ಲಾ ಮೇಲ್ಜಾತಿಯ ವಿದ್ಯಾರ್ಥಿಗಳೆ ತುಂಬಿದ್ದಾರೆ. ಸ್ವಾತಂತ್ರ ಬಂದು ಆರು ದಶಕಗಳು ಕಳೆಯುತ್ತಿದ್ದರೂ ದಲಿತರಿಗೆ ಶಿಕ್ಷಣವನ್ನು ಕೊಡಲಾಗದ ಸ್ಥಿತಿಯಲ್ಲಿ ದೇಶದ ಆಡಳಿತ ಜಡ್ಡುಗಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಹೊಸತು’ ಸಂಪಾದಕ ಸಿದ್ದನಗೌಡ ಪಾಟೀಲ್, ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಸಿದ್ದಲಿಂಗ ಸ್ವಾಮಿ ಉಪಸ್ಥಿತರಿದ್ದರು.
ಜೆಎನ್‌ಯುನಲ್ಲಿ ಶೇ.70 ವಿದ್ಯಾರ್ಥಿಗಳು ದಲಿತರು, ಹಿಂದುಳಿದವರು
ಬೆಂಗಳೂರು: ಜೆಎನ್‌ಯುನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶೇ.70ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಕೋಮುವಾದಿಗಳು ಜೆಎನ್‌ಯು ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಜೆಎನ್‌ಯು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಇಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ತೀರ ಬಡಕುಟುಂಬದಿಂದ ಬಂದವರಾಗಿದ್ದಾರೆ. ಹಲವು ಬಾರಿ ಪ್ರಾಧ್ಯಾಪಕರೆ ವಿದ್ಯಾರ್ಥಿಗಳಿಗೆ ಊಟವನ್ನು ಕೊಡಿಸುತ್ತಾರೆ. ತೀರ ಸಂಕಷ್ಟದ ನಡುವೆಯು ದೇಶದ ಸಮಸ್ಯೆಗಳ ಕುರಿತು, ಅದರ ಸುಧಾರಣೆಯ ಕುರಿತು ಕಾಳಜಿ ಹೊಂದಿರುತ್ತಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಗಡಿಯಲ್ಲಿ ಸೈನಿಕನೊಬ್ಬ ಸತ್ತರೆ, ಆ ಸೈನಿಕನಿಗೆ ಮೊದಲ ಶ್ರದ್ಧಾಂಜಲಿ ಸಲ್ಲುವುದು ಜೆಎನ್‌ಯುನಲ್ಲಿಯೆ. ಜೆಎನ್‌ಯುನಲ್ಲಿ ಸೈನಿಕರ ಮಕ್ಕಳಿಗೆ ಶೇ.15ರಷ್ಟು ವಿಶೇಷ ಮೀಸಲಾತಿಯಿದೆ. ಇದೆಲ್ಲವನ್ನು ತಿಳಿದು ಸಹ ಕೋಮುವಾದಿಗಳು ಜೆಎನ್‌ಯು ವಿರುದ್ಧ ಆರೋಪ ಮಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವದ ಎಲ್ಲ ರಾಜಕಿಯ ಪಕ್ಷಗಳ ಬಗೆಗೂ ಜೆಎನ್‌ಯು ವಿದ್ಯಾರ್ಥಿಗಳು ತಾತ್ವಿಕವಾದ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ. ದೇಶದ ಪ್ರತಿ ಆಗುಹೋಗುಗಳ ಕುರಿತು ಪ್ರತಿದಿನ ಗಂಭೀರ ಚರ್ಚೆಗಳನ್ನು ನಡೆಸುತ್ತಾರೆ. ಜೆಎನ್‌ಯುನಲ್ಲಿ ಹಲವು ಸಿದ್ಧಾಂತಗಳನ್ನೊಳಗೊಂಡಿರುವ ವಿದ್ಯಾರ್ಥಿಗಳು ಇದ್ದರೂ ಎಂದೂ ಜಗಳವಾಡಿಲ್ಲ. ಆದರೆ, ಇತ್ತೀಚೆಗೆ ಜೆಎನ್‌ಯುಗೆ ಹೊರಗಿನ ಶಕ್ತಿಗಳು ದಾಳಿ ಮಾಡುವ ಮೂಲಕ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.