×
Ad

ಕೇಂದ್ರ ಸರಕಾರದಿಂದ ಕಾರ್ಮಿಕರನ್ನು ಹತ್ತಿಕ್ಕುವ ಯತ್ನ: ಬಿ.ಎಂ.ಭಟ್

Update: 2016-04-24 21:30 IST

ಮಡಿಕೇರಿ, ಎ.24: ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ತರುವ ಮೂಲಕ ಈ ಎರಡೂ ವರ್ಗವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸಿಐಟಿಯು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ.ಎಂ.ಭಟ್ ಆರೋಪಿಸಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಿಐಟಿಯುನ 3ನೆ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕರು ಮತ್ತು ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ ಹಂತಹಂತವಾಗಿ ಈ ಎರಡೂ ವರ್ಗಗಳಿಗೆ ವಿರುದ್ಧವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಪಿಎಫ್ ಕಾಯ್ದೆ ಜಾರಿಯಿಂದ ಅಸಮಾಧಾನಗೊಂಡ ಕಾರ್ಮಿಕರು ಬೀದಿಗಿಳಿದು ಹೋರಾಡಿದ್ದಾರೆ. ಕಾರ್ಮಿಕ ಸಂಘಟನೆಗಳ ಶಕ್ತಿ ಏನು ಎನ್ನುವುದು ಸಾಬೀತಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದರು.

ಬಹುತೇಕ ಕಾರ್ಮಿಕರು ಅತೀ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿದ್ದು, ತುತ್ತು ಅನ್ನಕ್ಕಾಗಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಪ್ರತೀ ಕ್ಷೇತ್ರದಲ್ಲಿ ಕಾರ್ಮಿಕರ ಹಕ್ಕಿಗಾಗಿ ಹೋರಾಡಲು ಕಾರ್ಮಿಕರು ಸಂಘಟಿತರಾಗಬೇಕೆಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ, ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಿದ್ದಲ್ಲಿ ಮಾತ್ರ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸಿಕೊಳ್ಳಬಹುದೆಂದರು.

ಪಂಚಾಯತ್ ಮಾಜಿ ಉಪಾಧ್ಯಕ್ಷೆ ಎಚ್.ಎಂ.ಕಾವೇರಿ ಮಾತನಾಡಿ, ಕಾರ್ಮಿಕ ಸಮುದಾಯ ಶೈಕ್ಷಣಿಕವಾಗಿ ಉನ್ನತಿ ಸಾಧಿಸಬೇಕು. ಹೋರಾಟಗಾರರಿಗೆ ಕಾನೂನಿನ ಅರಿವಿದ್ದಾಗ ಮಾತ್ರ ಹೋರಾಟಗಳಿಗೆ ಫಲ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜ ಸೇವಕ ಹಾಗೂ ನಗರಸಭಾ ಮಾಜಿ ಸದಸ್ಯ ಬೇಬಿ ಮ್ಯಾಥ್ಯು, ಸಿಐಟಿಯುನ ಮೈಸೂರು ವಿಭಾಗದ ಮುಖ್ಯಸ್ಥ ಜಯರಾಂ, ಬಿಎಸ್ಸೆನ್ನೆಲ್ ಸಂಘಟನೆಯ ಅಧ್ಯಕ್ಷ ವಿ.ಜೆ.ಅಂಥೋಣಿ, ಎಲ್ ಐ ಸಿ ಸಂಘಟನೆಯ ಅಧ್ಯಕ್ಷ ಜನಾದರ್ನ, ಸಿಐಟಿಯು ಕಾರ್ಯದರ್ಶಿ ಮಹದೇವ, ಸ್ವಾಗತ ಸಮಿತಿಯ ಸಂಚಾಲಕ ಎನ್.ಡಿ.ಕುಟ್ಟಪ್ಪ, ಅಂಗನವಾಡಿ ಶಿಕ್ಷಕಿಯರ ಸಂಘಟನೆಯ ಅಧ್ಯಕ್ಷೆ ಕಾವೇರಮ್ಮ, ಬಿಸಿ ಊಟ ತಯಾರಕರ ಸಂಘಟನೆಯ ಅಧ್ಯಕ್ಷೆ ಕುಸುಮಾ ಮಾತನಾಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಡಾ. ಇ.ರಾ.ದುರ್ಗಾ ಪ್ರಸಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಪಿ.ಆರ್.ಭರತ್ ಹಾಗೂ ಎಚ್.ಬಿ.ರಮೇಶ್ ಉಪಸ್ಥಿತರಿದ್ದರು.

ಗುದ್ದಿಗೆ ಬಳಿಯಿಂದ ಕಾವೇರಿ ಕಲಾಕ್ಷೇತ್ರದವರೆಗೆ ಬೃಹತ್ ಮೆರವಣಿಗೆ ನಡೆಸಿದ ಕಾರ್ಮಿಕರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News