ಪಿಡಿಒ ಗೈರು:ಗ್ರಾಮಸ್ಥರ ಆಕ್ರೋಶ
ಮೂಡಿಗೆರೆ, ಎ.24: ಗ್ರಾಮಸಭೆಯಲ್ಲಿ ಗ್ರಾಮಸ್ಥರನ್ನು ಆಹ್ವಾನಿಸಿದ ಪಿಡಿಒ ತಾನೇ ಗೈರು ಹಾಜರಾಗಿ, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಗ್ರಾಮಸಭೆಗೆ ಆಗಮಿಸಿದ್ದ ನೂರಾರು ಜನ ಗ್ರಾಮಸ್ಥರಲ್ಲಿ ಅರ್ಧದಷ್ಟು ಜನ ಪಿಡಿಒ ಗೈರು ಹಾಜರಿಯನ್ನು ಪ್ರಶ್ನಿಸಿ, ಗ್ರಾಮಸಭೆ ನಡೆಸುವುದೇ ಬೇಡ ಎಂದು ಸಭೆಯನ್ನು ಬಹಿಷ್ಕರಿಸಿರುವ ಘಟನೆ ಬಿದರಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದಿದೆ.
ರಾಷ್ಟ್ರೀಯ ಪಂಚಾಯತ್‌ರಾಜ್ ದಿನದ ನಿಮಿತ್ತ ಕರೆದಿದ್ದ ವಿಶೇಷ ಗ್ರಾಮಸಭೆಯನ್ನು ರವಿವಾರ ಬೆಳಗ್ಗೆ ಗ್ರಾಪಂ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಪ್ರೇಮಾ ರವಿ, ಸದಸ್ಯರಾದ ಮನೋಜ್, ಲಿಯಾಕತ್‌ಅಲಿ, ಬಿ.ಎಂ.ಲೋಹಿತ್, ಉಪೇಂದ್ರಗೌಡ, ಸವಿತಾ, ಮಂಜುನಾಥ್ ಸಹಿತ ಗ್ರಾಮಸ್ಥರು ಸಭೆಗೆ ಹಾಜರಾಗಿದ್ದು, ಪಿಡಿಒ ಮಾತ್ರ ಸಭೆಗೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆ ನಡೆಸದಂತೆ ಚುನಾಯಿತ ಪ್ರತಿನಿಧಿಗಳನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹನುಮನಹಳ್ಳಿ ಧರಣೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ವಾರದಿಂದ ಪಿಡಿಒ ವಿಂದ್ಯಾ ಅವರು, ಗ್ರಾಪಂ ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಭಾಗದಲ್ಲಿ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಸಹಿತ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಚರ್ಚಿಸಿ ಪರಿಹಾರ ಕಂಡು ಹಿಡಿಯೋಣ ಎಂದುಕೊಂಡರೆ ಅಧಿಕಾರಿಯೇ ಪಂಚಾಯತ್ ಕಚೇರಿಗೆ ಹಾಜರಾಗುತ್ತಿಲ್ಲ. ನಾವು ಯಾರೊಂದಿಗೆ ಚರ್ಚಿಸೋಣ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಗ್ರಾಪಂ ಜನಪ್ರತಿನಿಧಿಗಳು ಮತ್ತು ಕಾರ್ಯದರ್ಶಿ ಜಗದೀಶ್ ಅವರ ಸಮ್ಮುಖದಲ್ಲಿ ಕೆಲ ವಿಚಾರಗಳನ್ನಷ್ಟೇ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡು ನಿರಾಯಾಸವಾಗಿ ಸಭೆಯನ್ನು ಮೊಟಕುಗೊಳಿಸಲಾಯಿತು.