ಚಿಕ್ಕಮಗಳೂರು: ಪ್ರೊ-ಕಬಡ್ಡಿ ಲೀಗ್-2016 ಹೊನಲು ಬೆಳಕಿನ ಪಂದ್ಯಾವಳಿ
ಮೂಡಿಗೆರೆ, ಎ.24: ಪ್ರಾಚೀನ ಕಾಲದ ಕ್ರೀಡೆಯಾಗಿದ್ದ ಕಬಡ್ಡಿ ವಿಶ್ವಕಪ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಡಾ. ಈಶ್ವರ ಅಂಗಡಿ ತಿಳಿಸಿದ್ದಾರೆ.
ಅವರು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹೊಯ್ಸಳ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ಪ್ರೊ-ಕಬಡ್ಡಿ ಲೀಗ್-2016 ಹೊನಲು ಬೆಳಕಿನ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, 1953ರಲ್ಲಿ ಉತ್ತರ ಭಾರತದ ಕೋನ್ ಬಡಾಣೆ ಎಂಬ ಹೆಸರಿನೊಂದಿಗೆ ಚಾಲ್ತಿಯಲ್ಲಿದ್ದ ಕಬ್ಬಡಿ ಆಟವು, ಪ್ರಾರಂಭದಲ್ಲಿ ಪುರುಷರು ಮಾತ್ರ ಆಡುತ್ತಿದ್ದರು. ನಂತರ ಮಹಿಳೆಯರು ಮಕ್ಕಳು ಆಡುವಂತಹ ಆಟವಾಯಿತು ಎಂದು ಹೇಳಿದರು.
1983ರಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾದಾರ್ಪಣೆ ಮಾಡಿತು. 1990ರಲ್ಲಿ ಬೀಜಿಂಗ್‌ನಲ್ಲಿ ನಡೆದ ಓಲಂಪಿಕ್‌ನಲ್ಲಿ ಭಾರತ ತಂಡವು ಭಾಗವಹಿಸಿತ್ತು. 2 ಬಾರಿ ಪುರುಷರ ವಿಶ್ವಕಪ್ ಹಾಗೂ 2009ರಲ್ಲಿ ಮಹಿಳಾ ಕಬಡ್ಡಿ ವಿಶ್ವಕಪ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.
ಅರ್ಜುನ ಪ್ರಶಸ್ತಿ ಪುರಸ್ಕೃತ ಭಾರತ ಕಬಡ್ಡಿ ತಂಡದ ನಾಯಕ ಸಿ.ಹೊನ್ನಪ್ಪಗೌಡ ಮಾತನಾಡಿ, ಶ್ರಮ, ಗುರಿ ಸಾಧಿಸುವ ಛಲದೊಂದಿಗೆ ಆಡಿದರೆ ಉತ್ತಮ ಆಟಗಾರರಾಗಿ ಸಾಧನೆ ಮಾಡಲು ಸಾದ್ಯವಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ. ಈಶ್ವರ ಅಂಗಡಿ, ಸಿ.ಹಿನ್ನಪ್ಪಗೌಡ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ನಿಸರ್ಗ, ಕೌಶಲ್ಯ, ಕಾವೇರಿ, ಲವ, ಅನೀಲ್, ನಿತೀನ್ ಜೈನ್, ನಾಗೇಶ್‌ಗೌಡ ಎಂಬವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ಬಿ.ಬಿ.ನಿಂಗಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮುಖಂಡರಾದ ಮಂಜೇಗೌಡ, ಜೆ.ಎಸ್.ರಘು, ಬಿ.ಎಂ.ಲೋಹಿತ್, ಎಂ.ಎನ್.ಅಶ್ವಥ್, ಎಂ.ಎಸ್.ಅನಂತ್, ಜಿಪಂ ನಿಖಿಲ್ ಚಕ್ರವರ್ತಿ, ವಿಶ್ವನಾಥ ರೈ, ಎಂ.ಸಿ.ನಾಗೇಶ್, ಕೆ.ಆರ್.ಶ್ರೀನಿವಾಸ್, ಎಸ್.ಕೆ.ಮಂಜುನಾಥ್, ಮುಗ್ರಳ್ಳಿ ಸಂಪತ್ ಮತ್ತಿತರರು ಉಪಸ್ಥಿತರಿದ್ದರು.