×
Ad

ಜಾನಪದ ಕಲೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ: ಡಾ. ಗುಂದಿ

Update: 2016-04-24 21:49 IST

ಅಂಕೋಲಾ,ಎ.24: ಇಂದಿನ ಸಾಹಿತ್ಯಕ್ಕೆ ಜಾನಪದವೇ ಮೂಲ ಬೇರಾಗಿದ್ದು,ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜಾನಪದ ಪರಿಷತ್‌ನವರು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹಿರಿಯ ಕಥೆಗಾರ ಡಾ. ರಾಮಕೃಷ್ಣ ಗುಂದಿ ಹೇಳಿದ್ದಾರೆ.

ಪಟ್ಟಣದ ಲಕ್ಷ್ಮೇಶ್ವರದ ಆರ್.ಎನ್. ನಾಯಕ ಸಭಾಭವನದಲ್ಲಿ ಕನ್ನಡ ಜಾನಪದ ಪರಿಷತ್‌ಜಿಲ್ಲಾ ಘಟಕದವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಾನಪದ ಗೀತ ಗಾಯನ ಸ್ಪರ್ಧೆಯನ್ನು ಗುಮಟೆ ಬಾರಿಸುವ ಮೂಲಕ ಅವರು ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ. ಎಂ.ಎಸ್. ಹಬ್ಬು ಮಾತನಾಡಿ, ನಿಸರ್ಗದ ಪ್ರೇರಣೆಯಿಂದ ಜನರ ಹೃದಯಾಂತರಾಳದಲ್ಲಿ ಮೂಡಿ ಬಂದ ಜಾನಪದ ಕಲೆಯನ್ನು ಬೆಳೆಸುವಲ್ಲಿ ಯುವಕರು ಮುಂದಾಗಬೇಕಿದೆ ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ಶಿವಾನಂದ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯವು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಮನರಂಜನೆ ನೀಡುವುದರೊಂದಿಗೆ ಸಂಸ್ಕೃತಿಯನ್ನು ಸಾರುವ ಸಂದೇಶವಾಹಕಗಳಾಗಿ ಗುರುತಿಸಿಕೊಂಡಿದೆ ಎಂದರು. ಇಂತಹ ಪ್ರಬುದ್ಧ ಜಿಲ್ಲೆಯ ಜಾನಪದ ಕಲೆಗಳು ದೇಶ-ವಿದೇಶಗಳ ಗಮನ ಸೆಳೆಯುವುದರೊಂದಿಗೆ ಗುರುತಿಸಿಕೊಂಡಿದೆ ಎಂದು ಹೇಳಿದರು.ಕನ್ನಡ ಜಾನಪದ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಜಾನಪದ ಪರಿಷತ್ ಕಾರವಾರ ತಾಲೂಕಾಧ್ಯಕ್ಷ ಪುರುಷೋತ್ತಮ ಗೌಡ, ಜಿಲ್ಲಾ ಘಟಕದ ಕೋಶಾಧ್ಯಕ್ಷ ಪ್ರೊ ಎನ್.ಡಿ. ಅಂಕೋಲೆಕರ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ನಿರ್ವಹಿಸಿದರು. ಕನ್ನಡ ಜಾನಪದ ಪರಿಷತ್ ಅಂಕೋಲಾ ತಾಲೂಕಾಧ್ಯಕ್ಷ ವಾಸುದೇವ ಗುನಗಾ ವಂದಿಸಿದರು. ಜಿಲ್ಲಾ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ಬಂಟ ದೇವ ಯುವಕ ಸಂಘ ಅಮದಳ್ಳಿ, ರಾಮನಾಥ ಗೆಳೆಯರ ಬಳಗ ಅಂಕೋಲಾ, ಬುಡಕಟ್ಟು ಜನಪದ ಸಂಘ ಅಡ್ಲೂರು ತಂಡಗಳು ಪಾಲ್ಗೊಂಡು ಅಮದಳ್ಳಿ ತಂಡ ಪ್ರಥಮ ಸ್ಥಾನ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News