×
Ad

ಮಡಿಕೇರಿ: ಸರಳ ವಿವಾಹಕ್ಕೆ ಆದ್ಯತೆ ನೀಡಲು ಡಿಸಿ ಅನೀಸ್ ಕರೆ

Update: 2016-04-24 21:50 IST

ಮಡಿಕೇರಿ,ಎ.24: ಕೊಡಗಿನ ಬಡ ಹಾಗೂ ಅನಾಥ ಮುಸ್ಲಿಮ್ ಕನ್ಯೆಯರ ಸಾಮೂಹಿಕ ವಿವಾಹವನ್ನು ಉಚಿತವಾಗಿ ನಡೆಸಿಕೊಂಡು ಬರುತ್ತಿರುವ ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ಈ ಬಾರಿ 15 ಬಡ ಕನ್ಯೆಯರಿಗೆ ವಿವಾಹ ಭಾಗ್ಯವನ್ನು ನೀಡಿತು. 10 ನೆ ವರ್ಷದ ಸಾಮೂಹಿಕ ವಿವಾಹ ಸಮಾರಂಭ ನಗರದ ಕಾವೇರಿಹಾಲ್‌ನಲ್ಲಿ ಸರಳ ರೀತಿಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ವಿವಾಹ ಎನ್ನುವುದು ಬಡ ಕುಟುಂಬಗಳನ್ನು ಇಂದು ಸಮಸ್ಯೆಯಂತೆ ಕಾಡುತ್ತಿದೆ ಎಂದು ವಿಷಾದಿಸಿದರು. ಶ್ರೀಮಂತರು ಸರಳ ವಿವಾಹಕ್ಕೆ ಆದ್ಯತೆಯನ್ನು ನೀಡಿದಾಗ ಇತರರು ಕೂಡ ಇದನ್ನು ಅನುಕರಣೆ ಮಾಡುವುದರಿಂದ ಬಡವರ ಸಮಸ್ಯೆಗೆ ಪರಿಹಾರ ಸಿಕ್ಕಿದಂತ್ತಾಗುತದೆ ಎಂದು ಅವರು ಅಭಿಪ್ರಾಯಪಟ್ಟರು. ಆಡಂಬರದ ವಿವಾಹಗಳಿಗಾಗಿ ವರನ ಕಡೆಯಿಂದ ಬರುವ ಒತ್ತಡದಿಂದ ವಧುವಿನ ಮನೆಯವರು ಬೀದಿ ಪಾಲಾಗುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಮುಸಲ್ಮಾನರಲ್ಲಿ ಹಲವರು ವಿವಾಹ ಸಮಾರಂಭವನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಸುತ್ತಾರೆ. ಇದನ್ನು ಒಂದು ದಿನಕ್ಕೆ ಸೀಮಿತಗೊಳಿಸುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿಗಳು ಸರಳ ವಿವಾಹದಿಂದಾಗುವ ಸಾಮಾಜಿಕ ಪರಿವರ್ತನೆಗಳ ಬಗ್ಗೆ ವಿದ್ವಾಂಸರುಗಳು ಬೆಳಕು ಚೆಲ್ಲಬೇಕೆಂದು ಕರೆ ನೀಡಿದರು.

 ವಧುವಿನ ಮನೆಯಿಂದ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದು ವಿವಾಹವಾಗುವ ಸಂಪ್ರದಾಯ ದೂರವಾಗಬೇಕೆಂದರು. ಲೇಖಕರೊಬ್ಬರು ವಿವಾಹ ಸಮಾರಂಭವನ್ನು ವಲ್ಗರ್ ಎಕ್ಸಿಬಿಷನ್ ಎಂದು ವಿಶ್ಲೇಷಿಸಿದ್ದು, ವಿವಾಹಗಳಲ್ಲಿ ಅದ್ದೂರಿಯ ಪ್ರದರ್ಶನಗಳ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿಗಳು ಹೇಳಿದರು. ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯ ಪೋಷಕರು ಹಾಗೂ ಮಾಜಿ ಶಾಸಕರಾದ ಕೆ.ಎಂ.ಇಬ್ರಾಹೀಂ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ತೋಡಾರ್ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಹ್ಮದ್ ನಹೀಮ್, ವಿವಾಹ ಎನ್ನುವ ಮಹತ್ಕಾರ್ಯ ಇಂದು ದುರಂತದಂತೆ ಬಡವರನ್ನು ಕಾಡುತ್ತಿರುವುದು ಬೇಸರದ ವಿಚಾರವೆಂದರು. ಶ್ರೀಮಂತರು ಅದ್ದೂರಿ ವಿವಾಹಗಳಿಗಾಗಿ ಅನಗತ್ಯ ದುಂದುವೆಚ್ಚ ಮಾಡದೆ ಮನೆಯ ಮದುವೆಯ ಸಂದರ್ಭ ಊರಿನ ಬಡವರ ಮದುವೆಯನ್ನೂ ನೆರವೇರಿಸುವಂತೆ ಕಿವಿ ಮಾತು ಹೇಳಿದರು. ನಗರದ ಬದ್ರಿಯಾ ಮಸೀದಿಯ ಧರ್ಮಗುರು ಖತೀಬ್ ಇಬ್ರಾಹೀಂ ಸಅದಿ ಮಾತನಾಡಿದರು. ಅಲ್-ಅಮೀನ್ ಸಂಸ್ಥೆಯ ಅಧ್ಯಕ್ಷರಾದ ಎಫ್.ಎ. ಮುಹಮ್ಮದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡದ ಕುಕ್ಕಾಜೆಯ ಧರ್ಮಗುರು ಸೆಯ್ಯದ್ ಹುಸೈನ್ ತಂಙಳ್ ಬಾಅಲವಿ ನಿಖಾ ಹ್ ನೆರವೇರಿಸಿಕೊಟ್ಟರು. ಕೊಡಗು ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಂ. ಮುಹಮ್ಮದ್ ಹಾಜಿ, ಉದ್ಯಮಿ ಪಿ.ಸಿ. ಹಸೈನಾರ್ ಹಾಜಿ, ನಿವೃತ್ತ ಸುಬೇದಾರ್ ಮೇಜರ್ ಸಿ.ಎಂ. ಸೋಮಯ್ಯ, ಸೈಯ್ಯದ್ ಅಬ್ದುಲ್ ಲತೀಫ್ ಹಾಜಿ, ಉದ್ಯಮಿ ಕೆ.ಎ. ಮುಹಮ್ಮದ್‌ಅತೀಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News