×
Ad

ಪ್ರೊಫೆಸರ್ ವಿರುದ್ಧ ದೇಶದ್ರೋಹ ಭಾಷಣದ ಸುಳ್ಳು ಆರೋಪ

Update: 2016-04-24 21:52 IST

ಶಿವಮೊಗ್ಗ,ಎ.24: ಇತ್ತೀಚೆಗೆ ಸಾಗರ ಪಟ್ಟಣದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್‌ನ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನರವರು ದೇಶದ್ರೋಹದ ಭಾಷಣ ಮಾಡಿದ್ದಾರೆ ಎಂಬ ಅನಗತ್ಯ ವಿವಾದ, ದುರುದ್ದೇಶಪೂರಿತ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ಸಂಘಪರಿವಾರದವರು ನಿರಂತರವಾಗಿ ಈ ರೀತಿಯ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಪ್ರಗತಿಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುವೆಂಪು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ, ನಿವೃತ್ತ ಪ್ರಾಧ್ಯಾಪಕ ಶ್ರೀಕಂಠ ಕೂಡಿಗೆ, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಪತ್ರಕರ್ತ ಎಚ್.ಬಿ.ರಾಘವೇಂದ್ರ, ರೈತ ಮುಖಂಡ ಕಡಿದಾಳು ಶಾಮಣ್ಣ, ಜಯದೇವಪ್ಪ, ಶ್ರೀಪಾಲ್‌ರವರು ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪ್ರೊ. ಮೇಟಿ ಮಲ್ಲಿಕಾರ್ಜುನ್‌ರವರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆರೋಪ ನಿರಾಧಾರ: 

ಮೇಟಿ ಮಲ್ಲಿಕಾರ್ಜುನರವರ ಭಾಷಣದಲ್ಲಿ ದೇಶದ್ರೋಹದ ಯಾವ ಮಾತುಗಳು ಇಲ್ಲವಾಗಿದೆ. ಆದಾಗ್ಯೂ ದೇಶದ್ರೋಹದ ಭಾಷಣ ಮಾಡಿದ್ದಾರೆ ಎಂದು ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆ. ಅಪಪ್ರಚಾರ ನಡೆಸುವ ಮೂಲಕ ಅವರ ವ್ಯಕ್ತಿತ್ವದ ತೇಜೋವಧೆ ಮಾಡಲಾಗುತ್ತಿದೆ. ಷಡ್ಯಂತ್ರ ನಡೆಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಮುಖಂಡರು ದೂರಿದ್ದಾರೆ. ಅಂಬೇಡ್ಕರ್ ಆಶಯಗಳ ಕುರಿತು ಮೇಟಿ ಮಲ್ಲಿಕಾರ್ಜುನರವರು ತಮ್ಮ ಭಾಷಣದಲ್ಲಿ ಮಾತನಾಡಿದ್ದಾರೆ. ದೇಶದ ಜನರ ಬದುಕು ಹಸನಾಗಬೇಕು ಎಂದು ಬಯಸಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಅವರ ಮಾತು ತಿರುಚಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ. ಇಂತಹ ಕೆಲಸಗಳು ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ದೇಶದ ಎಲ್ಲೆಡೆ ನಡೆಯುತ್ತಿದೆ ಎಂದು ಮುಖಂಡರು ಕಳವಳ ವ್ಯಕ್ತಪಡಿಸಿದರು.

 ಮಲ್ಲಿಕಾರ್ಜುನರವರ ಭಾಷಣದಲ್ಲಿ ಯಾವುದೇ ಜನಾಂಗದ ಜನರ ಮನಸ್ಸಿಗೆ ನೋವಾಗುವಂತಹ ವಿಚಾರಗಳಾಗಲಿ , ಅಭಿಪ್ರಾಯಗಳಾಗಲಿ, ದೇಶದ್ರೋಹದ ಮಾತುಗಳು ಇಲ್ಲವಾಗಿದೆ. ಈ ವಿವಾದದ ಹಿಂದೆ ಯಾವುದೇ ನೈಜ ದೇಶಪ್ರೇಮ ಕಾಣುತ್ತಿಲ್ಲ. ರಾಜಕೀಯ ಕಾಣುತ್ತಿದೆ. ಸಾಕ್ಷ್ಯಾಧಾರ ಇಲ್ಲದೇ ಈ ರೀತಿ ಆರೋಪ ಮಾಡುವುದು ಸಲ್ಲದು ಎಂದರು.

ಬಹುತ್ವ ಈ ದೇಶದ ಶಕ್ತಿ. ವೈಚಾರಿಕ ಬಹುತ್ವಕ್ಕೂ ಮನ್ನಣೆ ಇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಹೇಳಿಕೆ, ಚಟುವಟಿಕೆ ಸರಿಯಲ್ಲ. ಮಲ್ಲಿಕಾರ್ಜುನ್ ಅವರ ವಿರುದ್ಧದ ಆರೋಪಗಳನ್ನು ಬಲವಾಗಿ ಖಂಡಿಸುತ್ತೇವೆ. ಸಂಘ ಪರಿವಾರ ಇಂತಹ ವಿವಾದಗಳನ್ನು ನಿರಂತರವಾಗಿ ಹುಟ್ಟುಹಾಕುತ್ತಿವೆ. ಮುಂದೆ ಯಾರಾದರೂ ಇಂತಹ ವಿವಾದ ಹುಟ್ಟು ಹಾಕಿದರೆ ಅಂಥವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News