ಪ್ಲಾಸ್ಟಿಕ್ ಮುಕ್ತ ಪ್ರವಾಸಿತಾಣ: ಮಾಂದಲ ಪಟ್ಟಿಯಲ್ಲಿ ಸ್ವಚ್ಛತಾ ಶ್ರಮದಾನ
ಮಡಿಕೇರಿ, ಎ.24: ಕಾಲೂರಿನ ಶ್ರೀ ರಾಘವೇಂದ್ರ ಯುವಕ ಸಂಘದ ವತಿಯಿಂದ ಮಡಿಕೇರಿಯ ಗ್ರೀನ್ ಸಿಟಿ ಫೋರಂ ಸಹಯೋಗದೊಂದಿಗೆ ಹೆಸರುವಾಸಿ ಪ್ರವಾಸಿತಾಣ ಮಾಂದಲ ಪಟ್ಟಿಯಲ್ಲಿ ಲೆಟ್ ಅಸ್ ಕ್ಲೀನ್ ಇಟ್ ಸ್ವಚ್ಛತಾ ಶ್ರಮದಾನ ನಡೆಯಿತು.
ಗಾಳಿಬೀಡು ಯುವಕ ಸಂಘ, ಸಪ್ತಗಿರಿ ಯುವಕ ಸಂಘ, ಮಂಜುನಾಥ ಯುವಕ ಸಂಘ ಮತ್ತು ಅಯ್ಯಪ್ಪಯುವಕ ಸಂಘಗಳ ಸಹಕಾರದೊಂದಿಗೆ ಗ್ರಾಮಸ್ಥರು ಮಾತ್ರವಲ್ಲದೆ ಪ್ರವಾಸಿಗರು ಕೂಡ ಮಾಂದಲ ಪಟ್ಟಿಯ ಸಂಪೂರ್ಣ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಸಂಘ ಸಂಸ್ಥೆಗಳ ಪ್ರಮುಖರು ಪ್ರವಾಸಿಗರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಉಚಿತವಾಗಿ ಗ್ಲೌಸ್‌ಗಳನ್ನು ವಿತರಿಸಲಾಯಿತು. ಹಿರಿಯರಾದ ನಾಗೇಶ್ ಕಾಲೂರು ಮಾತನಾಡಿ, ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆಯೇ, ಪ್ರವಾಸಿತಾಣಗಳಲ್ಲಿ ಅಶುಚಿತ್ವದ ವಾತಾವರಣ ಹೆಚ್ಚಾಗುತ್ತಿದೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಮತ್ತು ಸ್ವಚ್ಛತೆಗಾಗಿ ಸಂಘ ಸಂಸ್ಥೆಗಳು ನಡೆಸುತ್ತಿರುವ ಶ್ರಮದಾನ ಶ್ಲಾಘನೀಯವೆಂದರು. ಈ ಸಂದರ್ಭ ಪ್ರವಾಸಿಗರಿಗೆ ಜಾಗೃತಿ ಮೂಡಿಸುವುದಕ್ಕಾಗಿ ನಿರ್ಮಿಸಲಾಗಿರುವ ಸ್ವಚ್ಛತಾ ಜಾಗೃತಿ ಫಲಕವನ್ನು ತಾಪಂ ಸದಸ್ಯ ರಾಯ್ ತಮ್ಮಯ್ಯ ಹಾಗೂ ಗ್ರೀನ್ ಸಿಟಿ ಫೋರಂನ ಸಂಚಾಲಕ ಚೆಯ್ಯಂಡ ಸತ್ಯ ಉದ್ಘಾಟಿಸಿ ಮಾತನಾಡಿದರು.
ಶ್ರೀರಾಘವೇಂದ್ರ ಯುವಕ ಸಂಘದ ಅಧ್ಯಕ್ಷ ಕಾಲೂರು ಮಹೇಶ್ ಅವರ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಮಹಿಳೆಯರು, ಮಕ್ಕಳು, ಪ್ರವಾಸಿಗರು ಸೇರಿದಂತೆ 150ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ಅರಣ್ಯ ಅಧಿಕಾರಿಗಳು ಈ ಸಂದಭರ್ ಉಪಸ್ಥಿತರಿದ್ದರು.