ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ
ಬೆಂಗಳೂರು, ಎ. 24: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಕನ್ನಡಪರ ಹೋರಾಟಗಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಚಿಕಿತ್ಸೆ ಫಲಿಸದೆ ರವಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಪುಂಡಲೀಕ ಹಾಲಂಬಿ(64)ಯವರು ಪತ್ನಿ ಶಾರದಮ್ಮ, ಪುತ್ರರಾದ ರಾಜೀವ್ ಮತ್ತು ರಾಘವ ಸೇರಿದಂತೆ ಅಪಾರ ಸಂಖ್ಯೆಯ ಕನ್ನಡಪರ ಹೋರಾಟದ ಒಡನಾಡಿಗಳು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಕಳೆದ ಕೆಲ ದಿನಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ರವಿವಾರ ಬೆಳಗ್ಗೆ 7:35ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಪುಂಡಲೀಕ ಹಾಲಂಬಿ ಅವರ ಪಾರ್ಥಿವ ಶರೀರವನ್ನು ಜಯನಗರದ 7ನೆ ಬ್ಲಾಕ್‌ನಲ್ಲಿರುವ ಅವರ ನಿವಾಸದಲ್ಲಿ ಕೆಲ ಕಾಲ ಇರಿಸಿದ್ದು, ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಆ ಬಳಿಕ ಹಾಲಂಬಿ ಅವರ ಪಾರ್ಥಿವ ಶರೀರವನ್ನು ಕಸಾಪ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಅನಂತರ ಹಾಲಂಬಿ ಅವರೇ ಸ್ಥಾಪಿಸಿದ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಆ ಬಳಿಕ ಸಂಜೆ 6:30ರ ಸುಮಾರಿಗೆ ಚಾಮರಾಜಪೇಟೆ, ಟಿಆರ್ ಮೀಲ್ ಸಮೀಪದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿ ಸಲಾಯಿತೆಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಚಂದ್ರಶೇಖರ ಹಾಲಂಬಿ ಮತ್ತು ವಾಸಂತಿ ದಂಪತಿಯ ಪುತ್ರರಾಗಿ ಜನಿಸಿದ ಪುಂಡಲೀಕ ಹಾಲಂಬಿ, ಪ್ರಾಥಮಿಕ ಶಿಕ್ಷಣವನ್ನು ಉಡುಪಿ ಜಿಲ್ಲೆ ಹಾಲಾಡಿಯಲ್ಲಿ ಪೂರ್ಣಗೊಳಿಸಿದರು.
ಆ ಬಳಿಕ ಬೆಂಗಳೂರಿನಲ್ಲಿ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪೂರ್ಣ ಗೊಳಿಸಿ ಬೆಂ.ವಿಶ್ವ ವಿದ್ಯಾನಿಲಯದ ಪ್ರಸಾರಾಂಗದಲ್ಲಿ ಸಂಯೋಜನಾಧಿಕಾರಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ನಾಟಕ, ಕಲೆ, ಸಂಸ್ಕೃತಿ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪುಂಡಲೀಕ ಹಾಲಂಬಿ ವಿದ್ಯಾರ್ಥಿ ಹಂತದಲ್ಲಿ ಯಕ್ಷಗಾನದಿಂದ ಪ್ರಭಾವಿತರಾಗಿ ನಟನ ಪ್ರಾವೀಣ್ಯತೆಯನ್ನು ಗಳಿಸಿಕೊಂಡಿದ್ದರು.
ಬೆಂಗಳೂರು ವಿವಿ ಪ್ರಸಾರಾಂಗದಲ್ಲಿ ಮೂವತ್ತಾರು ವರ್ಷಗಳ ಸೇವೆಯ ನಂತರ ನಿವೃತ್ತರಾದ ಪುಂಡಲೀಕ ಹಾಲಂಬಿ ಅವರು, ಬೆಂಗಳೂರು ವಿಶ್ವವಿದ್ಯಾನಿಲಯ ಬೋಧಕೇತರ ನೌಕರರ ಸಂಘದ ಅಧ್ಯಕ್ಷರಾಗಿ ಇಪ್ಪತ್ತು ವರ್ಷ ದುಡಿದಿದ್ದಾರೆ. ಏಕಕಾಲಕ್ಕೆ ಹಲವು ಸಂಸ್ಥೆಗಳಲ್ಲಿ ದುಡಿಯುವ ಸಾಮರ್ಥ್ಯ ಹೊಂದಿದ್ದ ಹಾಲಂಬಿ, ಬೆಂಗಳೂರು ವಿಶ್ವವಿದ್ಯಾನಿಲಯ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿದ್ದಲ್ಲದೆ, ಅದೇ ಸಂಸ್ಥೆಗೆ 3ಬಾರಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದು,್ದ ಹಾಲಂಬಿ ಅವರ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ.
ಹೊಟೇಲ್ ಉದ್ಯಮದಲ್ಲಿಯೂ ಹೆಸರು ಗಳಿಸಿದ್ದ ಹಾಲಂಬಿ, ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ, ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವದ ಮೇಲೆ 1997ರಲ್ಲಿ ಆ ಬ್ಯಾಂಕಿನ ಅಧ್ಯಕ್ಷರಾದರು. ಅಲ್ಲದೆ, ಹೊಟೇಲ್‌ಗಳಲ್ಲಿ ಕನ್ನಡದ ಬಾವುಟ ಹಾರಿಸಿದ ಕೀರ್ತಿ ಹಾಲಂಬಿಯವರಿಗೆ ಸಲ್ಲಬೇಕು. ಹೋಟೆಲ್ ಮತ್ತು ಬ್ಯಾಂಕು ಕ್ಷೇತ್ರಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಹಾಲಂಬಿ ಅವರದ್ದು ಪ್ರಮುಖ ಪಾತ್ರವಿತ್ತು. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣವಾಗಿ ಕನ್ನಡೀಕರಣ ಮಾಡಿದ್ದಲ್ಲದೆ, ಕನ್ನಡ ಸಾಹಿತಿಗಳ ಭಾವಚಿತ್ರಗಳನ್ನು ಬ್ಯಾಂಕಿನಲ್ಲಿ ತೂಗುಹಾಕುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದರು.
ಸಂಜೆ ಕಾಲೇಜಿನ ರೂವಾರಿ: ವಿದ್ಯಾರ್ಥಿದೆಸೆಯಲ್ಲೇ ಕನ್ನಡದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಪುಂಡಲೀಕ ಹಾಲಂಬಿಯವರು ಇಲ್ಲಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ವಿದ್ಯಾರ್ಥಿ ಸಮ್ಮೇಳನ ನಡೆಸಿ, ಸರಕಾರದ ಮೇಲೆ ಒತ್ತಡ ಹೇರಿ ಸಂಜೆ ಕಾಲೇಜುಗಳನ್ನು ಸ್ಥಾಪಿಸಲು ಮೂಲ ಕಾರಣಕರ್ತರಾದರು. ಕನ್ನಡಪರ ಚಳವಳಿಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದ ಹಾಲಂಬಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕನ್ನಡಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಲೆ ಬಂದಿದ್ದಾರೆ.
ಕನ್ನಡದ ಕೈಂಕರ್ಯ: ಸಾಹಿತಿ ಸಾ.ಶಿ.ಮರುಳಯ್ಯ ಕಸಾಪ ಅಧ್ಯಕ್ಷರಾಗಿದ್ದ ವೇಳೆ 1996ರಲ್ಲಿ ಹಾಸನದಲ್ಲಿ ಅದ್ದೂರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಆ ವೇಳೆ ಕಸಾಪ ಗೌರವ ಕಾರ್ಯದರ್ಶಿಯಾಗಿದ್ದ ಇಕ್ಬಾಲ್ ಅಹ್ಮದ್ ರಾಜೀನಾಮೆ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ನಿಯೋಜನೆಗೊಂಡ ಪುಂಡಲೀಕ ಹಾಲಂಬಿ, ಗೌರವ ಕಾರ್ಯದರ್ಶಿ, ಕೋಶಾಧ್ಯಕ್ಷ, ಕಸಾಪ ರಾಜ್ಯಾಧ್ಯಕ್ಷ ಸೇರಿದಂತೆ 2015ರ ವರೆಗೆ 19ವರ್ಷಗಳ ಸುದೀರ್ಘ ಕಾಲ ಶ್ರಮಿಸಿದ್ದು ನಿಜಕ್ಕೂ ದಾಖಲೆಯೇ ಸರಿ. ತಮ್ಮ ಅಧಿಕಾರಾವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿದ ಕೀರ್ತಿ ಪುಂಡಲೀಕ ಹಾಲಂಬಿ ಅವರಿಗೆ ಸಲ್ಲುತ್ತದೆ.
ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಮತ್ತು ಕ್ರೈಸ್ತ ಸಮುದಾಯದ ನಾ.ಡಿಸೋಜಾ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರನ್ನಾಗಿ ನಿಯೋಜಿಸುವ ಮೂಲಕ ಹಾಲಂಬಿ ಜಾತ್ಯತೀತತೆ ಮೆರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ.
ಕನ್ನಡಪರ ಹೋರಾಟಗಾರ, ಕಸಾಪ ಮಾಜಿ ಅಧ್ಯಕ್ಷರೂ ಆಗಿದ್ದ ಹಾಲಂಬಿ ನಿಧನದಿಂದ, ಕನ್ನಡದ ಗಟ್ಟಿ ಧ್ವನಿಯೊಂದು ನಿಶ್ಯಬ್ದವಾದಂತಾಗಿದೆ. ಹಾಲಂಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಸಾಪ ಅತ್ಯಂತ ಚಟುವಟಿಕೆಯಿಂದ ಕೂಡಿತ್ತು. ಪರಿಷತ್ತಿನ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಶ್ರಮಿಸಿದ್ದರು. ಹೊಟೇಲ್ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದ, ಹಾಲಂಬಿ ನಿಧನದಿಂದ ಕನ್ನಡದ ಕಟ್ಟಾಳು ಒಬ್ಬರು ಕಣ್ಮರೆಯಾದಂತೆ ಆಗಿದೆ.
-ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಸಚಿವೆ
ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ-ಕಳಕಳಿ ಹೊಂದಿದ್ದ ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಮಾಧ್ಯಮದಲ್ಲಿನ ವ್ಯಾಸಂಗ ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸುತ್ತದೆಂಬ ಸ್ಪಷ್ಟ ನಿಲುವು ಅವರದಾಗಿತ್ತು. ತಮ್ಮ ಅಧಿಕಾರಾವಧಿಯಲ್ಲಿ ಸಾಹಿತ್ಯ ಪರಿಷತ್‌ನ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿದ ಕೀರ್ತಿ ಹಾಲಂಬಿ ಅವರಿಗೆ ಸಲ್ಲುತ್ತದೆ.
ಹಾಲಂಬಿ ಷಷ್ಟಾಬ್ದಿಪೂರ್ತಿ ಸಮಾರಂಭದ ಸವಿ ನೆನಪುಗಳು ಇನ್ನೂ ನನ್ನ ಮನದಲ್ಲಿ ಹಸಿರಾಗಿರುವಾಗಲೇ ಅವರ ನಿಧನ ನನ್ನಲ್ಲಿ ಅತೀವ ದುಃಖ ಹಾಗೂ ನೋವನ್ನು ಉಂಟು ಮಾಡಿದೆ. ಪುಂಡಲೀಕ ಹಾಲಂಬಿ ಅವರ ನಿಧನ ಕನ್ನಡ ನಾಡಿಗೆ ಅಪಾರ ನಷ್ಟವನ್ನು ಉಂಟು ಮಾಡಿದೆ. ಹಾಲಂಬಿ ಅವರ ಕನ್ನಡಾಭಿಮಾನವನ್ನು ಕನ್ನಡಿಗರು ಸದಾ ಸ್ಮರಿಸುವುದು ಸೂಕ್ತ.
-ಸಿದ್ಧರಾಮಯ್ಯ, ಮುಖ್ಯಮಂತ್ರಿ