ಕೊನೆಗೂ ಸಿಗರನಹಳ್ಳಿ ದೇವಾಲಯಕ್ಕೆ ದಲಿತರಿಗೆ ಪ್ರವೇಶ
ಹೊಳೆನರಸೀಪುರ, ಎ.24: ತೀವ್ರ ಅಶಾಂತಿ ಸೃಷ್ಟಿಸಿದ್ದ ಸಿಗರನಹಳ್ಳಿಯ ಬಸವೇಶ್ವರ ದೇವಾಲಯದ ಬಾಗಿಲನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ ಅಧಿಕಾರಿಗಳು, ಇಬ್ಬರು ದಲಿತ ಮುಖಂಡರು ಹಾಗೂ ಮೂವರು ಸವರ್ಣೀಯರ ಸಮ್ಮುಖದಲ್ಲಿ ಬಸವೇಶ್ವರ ದೇವಾಲಯದ ಬಾಗಿಲನ್ನು ತೆರೆಯಲಾಯಿತು.
ಇಂದಿನಿಂದ ಎಲ್ಲ್ಲಸಮುದಾಯದ ಜನರು ಮುಕ್ತವಾಗಿ ದೇವಾಲಯದ ಪ್ರವೇಶ ಮಾಡಬಹುದು ಎಂದು ತಿಳಿಸಿದ ಅಧಿಕಾರಿಗಳು, ದೇವಾಲಯಕ್ಕೆ ಈ ಹಿಂದೆ ಇದ್ದ ಪೂಜಾರಿಯನ್ನು ಬಿಟ್ಟು ಹೊಸ ಪೂಜಾರಿಯನ್ನು ನೇಮಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ಸುಮಾರು 7 ತಿಂಗಳಿನಿಂದ ಸಿಗರನಹಳ್ಳಿಯಲ್ಲಿ ಉಂಟಾಗಿದ್ದ ದಲಿತರು ಮತ್ತು ಸವರ್ಣೀಯರ ನಡುವಿನ ಘರ್ಷಣೆಯಿಂದ ಬಸವೇಶ್ವರ ದೇವಾಲಯದ ಬಾಗಿಲನ್ನು ಮುಚ್ಚಲಾಗಿತ್ತು. ಸಿಗರನಹಳ್ಳಿಯಲ್ಲಿ ಪೊಲೀಸರ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ದಿನದಿಂದ ಇರಿಸಲಾಗಿರುವ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ದೇವಾಲಯದ ಬಾಗಿಲು ತೆರೆಯುವ ವೇಳೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಉಪ ವಿಭಾಗಾಧಿಕಾರಿ ವಿಜಯ, ಹೊಳೆನರಸೀಪುರ ತಹಶೀಲ್ದಾರ್ ರೇಣುಕುಮಾರ್, ಡಿವೈಎಸ್‌ಪಿ ಕಿಶೋರ್ ಬಾಬು ಉಪಸ್ಥಿತರಿದ್ದರು.