ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾವಹಿಸಿ:ಸಚಿವ ಕಿಮ್ಮನೆ ರತ್ನಾಕರ
ಸೊರಬ, ಎ. 25: ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಸೂಚಿಸಿದರು. ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ನಿಭಾಯಿಸುವ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವವಾಗದಂತೆ ನೋಡಿಕೊಳ್ಳಬೇಕು. ತೀವ್ರ ಸಮಸ್ಯೆ ಕಂಡು ಬಂದ ಗ್ರಾಮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ, ಅನುದಾನದ ಕೊರತೆ ಇದ್ದಲ್ಲಿ ಎನ್‌ಆರ್‌ಐಜಿಯಲ್ಲಿ ಬಳಸಿಕೊಂಡು ವ್ಯವಸ್ಥೆ ಮಾಡಬೇಕು ಎಂದು ತಾಪಂ ಅಧಿಕಾರಿಗಳಿಗೆ ತಿಳಿಸಿದ ಅವರು, ತೊಟ್ಟಿಗಳ ಸ್ವಚ್ಛತೆಯ ಜವಾಬ್ದಾ ರಿಯನ್ನು ಗ್ರಾಪಂ ವಹಿಸಬೇಕು ಜೊತೆ ಯಲ್ಲಿ ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಸಂಘ- ಸಂಸ್ಥೆಯವರ ಸಹಕಾರ ದೊಂದಿಗೆ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು. ಸರಕಾರ ಬರಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ 2.26ಕೋಟಿ ರೂ. ಬರ ಪರಿಹಾರವನ್ನು ತಾಲೂ ಕಿಗೆ ಒದಗಿಸಲಾಗಿದೆ. ಮೊದಲ ಹಂತದಲ್ಲಿ 1.86 ಕೋಟಿ ರೂ. ನೀಡಲಾಗಿದ್ದು, ಸಮಗ್ರವಾಗಿ ಬಳಸಿಕೊಂಡ ನಂತರ ಎರಡನೆ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿಯೇ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸೊರಬ ತಾಲೂಕಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಭತ್ತ ಖರೀದಿ ಕೇಂದ್ರಕ್ಕೆ ಜಿಲ್ಲೆಗೆ 32ಕೋಟಿ ರೂ. ಬಿಡುಗಡೆಯಾಗಿದೆ. ಪೋಷಕರು ಕೆಲಸದ ನಿಮಿತ್ತ ತೆರಳಿದರೂ ಸಹ ಮಕ್ಕಳಿಗೆ ತೊಂದರೆಯಾಗದಂತೆ ಮಕ್ಕಳನ್ನು ಕರೆತಂದು ಬಿಸಿಯೂಟದ ಕೇಂದ್ರಗಳಿಗೆ ಸೇರಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದ ಅವರು, ಕುಡಿಯುವ ನೀರನ್ನು ಪೂರೈಸಲು ತೊಂದರೆಯಾಗದಂತೆ ಮೆಸ್ಕಾಂ ಅಧಿಕಾರಿಗಳು ಹಾಗೂ ಜಿಪಂ ಅಧಿಕಾ ರಿಗಳು ಎಚ್ಚರ ವಹಿಸಬೇಕು ಎಂದರು. ಸಭೆೆಯಲ್ಲಿ ಶಾಸಕರಾದ ಮಧುಬಂಗಾರಪ್ಪ, ಆರ್. ಪ್ರಸನ್ನಕುಮಾರ್, ತಾಪಂ ಅಧ್ಯಕ್ಷ ಜೈಶೀಲಪ್ಪ, ಪಪಂ ಪ್ರಶಾಂತ್ ಮೇಸ್ತ್ರಿ, ತಹಶೀಲ್ದಾರ್ ಕವಿತಾ ಯೋಗಪ್ಪನವರ್, ತಾಪಂ ಇಒ ಎಸ್.ಎಂ.ಡಿ. ಇಸ್ಮಾ
ಯೀಲ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ. ಎಂ. ಸತೀಶ್ ಕುಮಾರ್, ಮೆಸ್ಕಾಂ ಇಇ ಮುಜೀಬ್ ಅಹ್ಮದ್, ಜಿಪಂ ಎಇಇ ನಂಜುಂಡಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಮಂಜುಳಾ, ಪಪಂ ಮುಖ್ಯಾಧಿಕಾರಿ ಎಂ.ಕೆ. ಸುರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಪಂ ಸದಸ್ಯರು ಉಪಸ್ಥಿತರಿದ್ದರು.