ಶೀಘ್ರದಲ್ಲಿಲಯೇ ಅಲ್ಪಸಂಖ್ಯಾತರಿಗೆ ಹಿಂದುಳಿದ ಸ್ಥಾನಮಾನ: ಬಲ್ಕೀಸ್ ಬಾನು
ದಾವಣಗೆರೆ, ಎ. 25: ಶೀಘ್ರದಲ್ಲಿಯೇ ರಾಜ್ಯದ ಅಲ್ಪಸಂಖ್ಯಾತರಿಗೂ ಹಿಂದುಳಿದ ಸ್ಥಾನಮಾನ ನೀಡುವ ಭರವಸೆಯನ್ನು ಕೇಂದ್ರ ಸರಕಾರ ನೀಡಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು ತಿಳಿಸಿದ್ದಾರೆ. ಸೋಮವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಹಿಂದುಳಿದ ಸ್ಥಾನಮಾನ ಸಿಕ್ಕಿದೆ. ಆದರೆ, ಕೇಂದ್ರ ಸರಕಾರ ಈ ಸ್ಥಾನಮಾನ ನೀಡಿಲ್ಲ. ಈ ಸಂಬಂಧ ಈಗಾಗಲೇ ಕೇಂದ್ರ ಸರಕಾರದ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು. ಮುಸ್ಲಿಮರಿಗೆ ಶೇ. 4ರಷ್ಟಿದ್ದ ಮೀಸಲಾತಿಯನ್ನು ಶೇ. 6ಕ್ಕೆ ಏರಿಸಬೇಕು. ಈ ಮೂಲಕ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಬೇಕು ಎಂದ ಅವರು, ಅಲ್ಪಸಂಖ್ಯಾತರ ಅಯೋಗದ ವತಿಯಿಂದ ರಾಜ್ಯದಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ತೆರೆಯಲಾಗುವುದು. ಆಯೋಗದ ಖರ್ಚಿನಲ್ಲಿಯೇ ಪ್ರತಿ ಬಿಪಿಎಲ್ ಅಲ್ಪಸಂಖ್ಯಾತರಿಗೆ ಯಶಸ್ವಿನಿ ಯೋಜನೆಗೆ ಆಯೋಗವೇ ಹಣ ತುಂಬಿ ಯೋಜನೆಗೆ ಒಳಪಡಿಸಲಾಗುವುದು ಎಂದರು.
ಸುಮಾರು 25ಕ್ಕೂ ಹೆಚ್ಚು ಅಲ್ಪಸಂಖ್ಯಾತ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಿಗೆ ಭಡ್ತಿ ನೀಡಲಾಗುವುದು. ಪ್ರತಿ ಜಿಲ್ಲೆಗಳಿಗೆ 2 ರಂತೆ ಜ್ಯೂನಿಯರ್ ಕಾಲೇಜುಗಳನ್ನು ತೆರೆಯಲಾಗುವುದು. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದಲ್ಲಿ ಒಂದು ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಸಹಕಾರ ಒಕ್ಕೂಟ ರಚನೆಗೆ ಸಹಕಾರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹಿಳೆಯರ ಸಹಕಾರ ಸಂಘಗಳನ್ನು ರಚನೆ ಮಾಡಿ ಸ್ವಾವಲಂಬಿ ಬದುಕು ನಡೆಸಲು ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಡಲಾಗುವುದು. ವಸತಿರಹಿತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಲ್ಲಿ ಮಾಸಿಕವಾಗಿ 1,500 ರೂ. ನೀಡಲಾಗುವುದು. ಅಲ್ಪಸಂಖ್ಯಾತರ ಆಯೋಗ 1996ರಲ್ಲಿ ರಚನೆಯಾಗಿದ್ದರೂ ಕೂಡ ನಾಗರಿಕ ಸಂಹಿತೆ ಅಧಿಕಾರ ದೊರೆತಿರಲಿಲ್ಲ. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಅಲ್ಪಸಂಖ್ಯಾತರ ಆಯೋಗಕ್ಕೆ ಸಂವಿಧಾನಿಕ ಅಧಿಕಾರವನ್ನು ನೀಡಿದ್ದಾರೆ. ಅಲ್ಪಸಂಖ್ಯಾತರು,ಮಹಿಳೆಯರು, ಅಸಹಾಯಕರು, ಅಧಿಕಾರಿಗಳು, ಯಾರು ಬೇಕಾದರು ಆಯೋಗದ ಬಳಿ ನ್ಯಾಯ ಕೇಳಲು ಪ್ರಕರಣ ದಾಖಲಿಸಬಹುದು. ಪ್ರಕರಣದ ಕುರಿತು ತನಿಖೆ ನಡೆಸುವ ಅಧಿಕಾರ ಆಯೋಗಕ್ಕೆ ಇದೆ ಎಂದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮುಹಮ್ಮದ್ ಸಿರಾಜ್, ಕಿಶನ್ ಜೈನ್ ಹಾಗೂ ಅಲ್ಪಸಂಖ್ಯಾತ ಸರಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.
: