×
Ad

ವಿವಿಧ ಗ್ರಾಪಂಗಳಿಗೆ ವಿಧಾನ ಪರಿಷತ್ ಸದಸ್ಯರ ಭೇಟಿ

Update: 2016-04-25 22:08 IST

ಮಡಿಕೇರಿ, ಎ.25: ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ, ಮಡಿಕೇರಿ ತಾಲೂಕಿನ ಪೆರಾಜೆ, ಚೆಂಬು, ಸಂಪಾಜೆ ಮತ್ತು ಮದೆ ಗ್ರಾಪಂಗಳಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಗ್ರಾಪಂ ಅಭಿವೃದ್ಧಿ ಸಂಬಂಧ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಂದ ಹಲವು ಮಾಹಿತಿ ಪಡೆದರು. ಹಾಗೆಯೇ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯರಿಗೆ ವರ್ಷಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಜಿಲ್ಲೆಯ 104 ಗ್ರಾಪಂಗಳು, ಮೂರು ಪಪಂಗಳು ಹಾಗೂ ಒಂದು ನಗರಸಭೆ ವಿಧಾನ ಪರಿಷತ್ ವ್ಯಾಪ್ತಿಗೆ ಬರಲಿದ್ದು, ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಕುಂದುಕೊರತೆ ವಿಚಾರಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಸುನೀಲ್ ಸುಬ್ರಮಣಿ ತಿಳಿಸಿದರು. ಇನ್ನು ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸದಸ್ಯರಿಂದ ಗ್ರಾಪಂ ಅಭಿವೃದ್ಧಿ ಸಂಬಂಧ ಮಾಹಿತಿ ಪಡೆಯಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಎಲ್ಲ ಗ್ರಾಪಂಗಳು ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು ಎಂದು ಸುನೀಲ್ ಸುಬ್ರಮಣಿ ಸಲಹೆ ನೀಡಿದರು.

ಕಾಲಕಾಲಕ್ಕೆ ಗ್ರಾಮ ಸಭೆಗಳನ್ನು ನಡೆಸಿ ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಿರುವ ವಸತಿ, ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರು, ಶೌಚಾಲಯ, ರಸ್ತೆ ಹಾಗೆಯೇ ಶಾಲೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕಾಳಜಿ ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರು ತಿಳಿಸಿದರು. ಪ್ರತೀ ಗ್ರಾಪಂ ವ್ಯಾಪ್ತಿಯ ಎಲ್ಲ ಕುಟುಂಬಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಾಣವಾಗಬೇಕು. ಪ್ರತಿಯೊಬ್ಬರಿಗೂ ವಸತಿ ಯೋಜನೆಗಳನ್ನು ತಲುಪಿಸಬೇಕು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೌಲಭ್ಯಗಳು ಹಾಡಿಗಳಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತೆ ಅವರು ಹೇಳಿದರು.

ತಾಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಪೆರಾಜೆ ಗ್ರಾಪಂ ವ್ಯಾಪ್ತಿಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡಬೇಕಿದೆ. ರಸ್ತೆ ನಿರ್ಮಾಣ ಮಾಡಬೇಕಿದೆ. ಬಾಕಿ ಇರುವ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಬೇಕಿದೆ ಎಂದು ಮನವಿ ಮಾಡಿದರು. ಚೆಂಬು ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ಮಾಣ ಮಾಡಬೇಕಿದೆ. ಕೆಲವು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಹಾಗೆಯೇ ವಸತಿ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಚೆಂಬು ಗ್ರಾಪಂ ಸದಸ್ಯರು ಮನವಿ ಮಾಡಿದರು.

ಸಂಪಾಜೆ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಂಗ್ರಹಣೆಗೆ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಬೇಕಿದೆ. ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಿದೆ. ರುದ್ರಭೂಮಿಗೆ ಜಾಗ ಗುರುತಿಸಬೇಕಿದೆ. ಸಾಮಾನ್ಯ ವರ್ಗದವರಿಗೂ ಮನೆ ಕಟ್ಟಿಸಿಕೊಡಬೇಕಿದೆ. ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಅಲ್ಲಿನ ಸದಸ್ಯರು ತಿಳಿಸಿದರು. ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ಚೆಂಬು ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗುತ್ತಿದೆ. ಇನ್ನಷ್ಟು ಕುಂದುಕೊರತೆಗಳಿದ್ದು, ಅವುಗಳನ್ನು ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯರಲ್ಲಿ ಮನವಿ ಮಾಡಿದರು.

ಸಂಪಾಜೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಕಳಗಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಪಾಜೆ ಗ್ರಾಪಂ ಮಾದರಿಯಾಗಿ ಗುರುತಿಸಿಕೊಂಡಿದೆ. ಸ್ವಚ್ಛತಾ ಆಂದೋಲನದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಸರಕಾರದ ಎಲ್ಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸಿದ್ದು, ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ವಿದ್ಯುತ್ ಬಿಲ್ ಸಂಬಂಧಿಸಿದಂತೆ ಎಲ್ಲ ಗ್ರಾಪಂಗಳಿಗೂ ಒಂದೇ ರೀತಿಯ ಬಿಲ್ ಕಳುಹಿಸಿಕೊಡಲಾಗುತ್ತದೆ. ಈ ಕುರಿತು ಪರಿಶೀಲಿಸುವಂತೆ ಪರಿಷತ್ ಸದಸ್ಯರಲ್ಲಿ ಮನವಿ ಮಾಡಿದರು.

ಮದೆ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ಮದೆ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ, ಕಾಟಕೇರಿ ರಸ್ತೆ, ಅಬ್ಬಿಕೊಲ್ಲಿಯಿಂದ ಎರಡನೇಮೊಣ್ಣಂಗೇರಿ ಸಂಪರ್ಕ ಕಲ್ಪಿಸುವಲ್ಲಿ ತೂಗುಸೇತುವೆ ನಿರ್ಮಿಸಿಕೊಡಬೇಕು ಎಂದು ಅವರು ಹೇಳಿದರು.

ಪೆರಾಜೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಮದೆ ಗ್ರಾಪಂ ಉಪಾಧ್ಯಕ್ಷೆ ರತ್ನಾ, ಮದೆ ಗ್ರಾಪಂ ಪಿಡಿಒ ಬೋಜಮ್ಮ, ಸಂಪಾಜೆ ಗ್ರಾಪಂ ಪಿಡಿಒ ಶೋಭಾ ರಾಣಿ, ಚೆಂಬು ಗ್ರಾಪಂ ಪಿಡಿಒ ಹೇಮಂತ್, ಪೆರಾಜೆ ಗ್ರಾಪಂ ಪಿಡಿಒ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News