×
Ad

ಸಾಂಪ್ರದಾಯಿಕ ಮೀನುಗಾರರಸ್ಥಿತಿಗತಿ ಬಗೆ್ಗ ಸಮೀಕ್ಷೆ

Update: 2016-04-25 22:11 IST

< ಶ್ರೀನಿವಾಸ ಬಾಡಕ

ಕಾರವಾರ, ಎ.25: ನಗರದ ರವೀಂದ್ರನಾಥ ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಉದ್ಯೋಗ ನಡೆಸುತ್ತಿರುವ ಮೀನುಗಾರರ ಬದುಕು, ಸಂಸ್ಕೃತಿ ಮತ್ತು ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಮೀನುಗಾರರ ಫೆಡರೇಶನ್, ಹೈದರಾಬಾದ್‌ನ ಸ್ವಯಂ ಸೇವಾ ಸಂಸ್ಥೆಯೊಂದರಿಂದ ಸಮೀಕ್ಷೆ ನಡೆಸಿ, ಖಾಯಂ ದಾಖಲೆಯನ್ನಾಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.

ಹೈದರಾಬಾದ್‌ನ ದಕ್ಷಿಣ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಸ್ಥೆಯು ಸಮೀಕ್ಷಾ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದೆ. ಫೌಂಡೇಷನ್‌ನ ಪ್ರತಿನಿಧಿಗಳಾದ ಅನನ್ಯರಾವ್ ಹಾಗೂ ಮೇರಿ ಎಂಬವರು ಸಾಂಪ್ರದಾಯಿಕ ಮೀನುಗಾರರು ಎಷ್ಟು ವರ್ಷಗಳಿಂದ ಕಡಲತೀರದ ಮೇಲೆ ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಮೀನುಗಾರಿಕೆಯಲ್ಲದೇ ಬೇರೆ ಇನ್ಯಾವ ಉದ್ದೇಶಕ್ಕಾಗಿ ಕಡಲತೀರವನ್ನು ಬಳಸಿಕೊಳ್ಳಲಾಗುತ್ತದೆ. ಅವರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಸ್ಥಿತಿ ಗತಿ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಅಭಿಪ್ರಾಯ ಸಂಗ್ರಹಿಸಿದರು.

ಕಡಲತೀರದಲ್ಲಿ ಸಾಂಪ್ರದಾಯಿಕ ಏಡಿ ಬಲೆ, ಚಿಟ್‌ಕಾಂಟ್ಲೆ, ಪಟ್ಟೆ ಬಲೆ, ಬೀಡು ಬಲೆ ಮೊದಲಾದ ರೀತಿಯ ಮೀನುಗಾರಿಕೆ ನಡೆಸಲಾಗುತ್ತದೆ. ಅಲ್ಲದೆ ಮೀನುಗಾರ ಮಹಿಳೆಯರಿಂದ ಮೀನು ಒಣಗಿಸಲು ಕಡಲತೀರ ಉಪಯೋಗಿಸಿಕೊಳ್ಳಲಾಗುತ್ತದೆ. ನಮಗೆ ಈ ಉದ್ಯೋಗ ಬಿಟ್ಟರೆ ಅನ್ಯ ಉದ್ಯೋಗ ಗೊತ್ತಿಲ್ಲ. ಸದ್ಯ ಮೀನು ಕ್ಷಾಮದಿಂದ ಬದುಕುವುದೇ ಕಷ್ಟವಾಗಿದೆ ಎಂದು ಇಲ್ಲಿನ ಸ್ಥಳೀಯ ಮೀನುಗಾರರು ಸಮೀಕ್ಷಕರಿಗೆ ತಮ್ಮ ಸ್ಥಳೀಯ ಪರಿಸ್ಥಿತಿಗಳನ್ನು ವಿವರಿಸಿದರು. ಸಮೀಕ್ಷೆಗೆ ಕಾರಣ: ಕಾರವಾರ ಕಡಲತೀರದ ಮೇಲೆ ತಲೆತಲಾಂತರಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತಿದೆ. ಆದರೆ 2014ರ ನ.1ರಂದು ಜಿಲ್ಲಾಡಳಿತ ಏಕಾಏಕಿ ಸಾಂಪ್ರದಾಯಿಕ ಮೀನುಗಾರರ ಗುಡಿಸಲುಗಳನ್ನು ತೆರವುಗೊಳಿಸಿ ಅತಂತ್ರರನ್ನಾಗಿಸಿತ್ತು. ನದಿ, ಸಮುದ್ರ ತೀರ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಾಂಪ್ರದಾಯಿಕ ಮೀನುಗಾರರನ್ನು ಯಾವುದೇ ಪರಿಸ್ಥಿತಿಯಲ್ಲಿ ಎತ್ತಂಗಡಿ ಮಾಡಬಾರದು. ಅವರನ್ನು ಇದ್ದ ಜಾಗದಲ್ಲಿಯೇ, ಉದ್ಯೋಗ ನಡೆಸಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಅಲ್ಲದೆ ಅವರ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಯೋಜನೆ ರೂಪಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ಆ ಆದೇಶವನ್ನು ಪ್ರವಾಸೋದ್ಯಮ ನೆಪದಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಗಾಳಿಗೆ ತೂರಿ ಮೀನುಗಾರರನ್ನು ಅತಂತ್ರರನ್ನಾಗಿಸಿದೆ ಎಂದು ಮೀನುಗಾರರ ಹಿರಿಯ ಮುಖಂಡ ಪಿ. ಎಮ್. ತಾಂಡೇಲ್, ಕೆ.ಟಿ.ತಾಂಡೇಲ್, ಗಂಗಾಧರ್ ಜಾಂಬಾವಳಿಕರ ಮುಂತಾದವರು ಜಿಲ್ಲಾಡಳಿತದ ವಿರುದ್ಧ ಆರೋಪಿಸುತ್ತಲೇ ಬಂದಿದ್ದರು. ಜಿಲ್ಲಾಡಳಿತದ ಅನ್ಯಾಯವನ್ನು ಸ್ಥಳೀಯ ಮುಖಂಡರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೀನುಗಾರರನ್ನು ಪ್ರತಿನಿಧಿಸುವ ರಾಜ್ಯಮೀನುಗಾರರ ಪರಿಷತ್ ಹಾಗೂ ರಾಷ್ಟ್ರೀಯ ಮೀನುಗಾರರ ಫೆಡರೇಶನ್‌ಗಳ ಗಮನಕ್ಕೂ ತರಲಾಗಿತ್ತು.

ತಲೆ ತಲಾಂತರಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ಉದ್ಯೋಗ ಕಡಲತೀರದ ಮೇಲೆ ನಡೆಯುತ್ತಿದೆ. ಮಳೆ, ಗಾಳಿಯಿಂದ ತಮ್ಮ ದೋಣಿ, ಬಲೆ ಹಾಗೂ ಇತರೆ ಪರಿಕರಗಳನ್ನು ಸಂರಕ್ಷಿಸಿಡಲು ಗುಡಿಸಲುಗಳನ್ನು ನಿರ್ಮಿಸಿಕೊಳ್ಳುವುದು ಅತೀ ಆವಶ್ಯಕವಾಗಿರುತ್ತದೆ. ಆದರೆ ಕಳೆದ 2014ರ ನವೆಂಬರ್ ತಿಂಗಳಲ್ಲಿ ಗುಡಿಸಲುಗಳನ್ನು ತೆರುವುಗೊಳಿಸಿದನಂತರ ಜಿಲ್ಲಾಡಳಿತ ಮತ್ತೆ ಗುಡಿಸಲು ಕಟ್ಟಿಕೊಳ್ಳಲು ಸಾಂಪ್ರದಾಯಿಕ ಮೀನುಗಾರರಿಗೆ ಅವಕಾಶ ಕೊಡುತ್ತಿಲ್ಲ. ಕೆಲವೊಂದು ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಧಕ್ಕೆಯಾಗುತ್ತದೆ ಎಂದು ಕಡಲತೀರದ ಮೇಲೆ ಮೀನುಗಾರಿಕೆ ನಿಷೇಧಿಸಲು ಜಿಲ್ಲಾಡಳಿತ ಮುಂದಾಗಿತ್ತು.ಈ ಎಲ್ಲ ಹಿನ್ನೆಲೆಯಲ್ಲಿ ಮೀನುಗಾರರ ಬದುಕುವ ಹಕ್ಕು ಮೊಟಕಾಗುತ್ತಿರುವುದನ್ನು ಮನಗಂಡ ರಾಷ್ಟ್ರೀಯ ಮೀನುಗಾರರ ಫೆಡರೇಶನ್‌ಅಧ್ಯಕ್ಷ ಸಲ್ಡಾನಾ, ಸುಪ್ರೀಂ ಕೋರ್ಟ್ ಆದೇಶದನ್ವಯ ಕಡಲತೀರದ ಮೇಲೆ ಮೀನುಗಾರರ ಹಕ್ಕು ಖಾಯಂ ಆಗಿ ದಾಖಲಿಸಲು ಸಮೀಕ್ಷೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ತಮ್ಮ ರಾಜ್ಯ ಪತ್ರಗಳಲ್ಲಿ ಖಾಯಂಆಗಿ ದಾಖಲಿಸಲು ವರದಿಯನ್ನು ಒಪ್ಪಿಸಲಿದ್ದಾರೆ. ಅಲ್ಲದೆ ಇಡೀ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಸಿಆರ್‌ಝಡ್ ಕಾನೂನಿನಿಂದ ಮೀನುಗಾರರಿಗೆ ಕಡಲತೀರದ ಮೇಲೆ ವಾಸ್ತವ್ಯಕ್ಕಾಗಿ ಮನೆ ಇಲ್ಲವೇ ದೊಡ್ಡ ಪ್ರಮಾಣದ ಶೆಡ್ ನಿರ್ಮಿಸಿಕೊಳ್ಳಲು ತೊಡಕಾಗುತ್ತಿದೆ. ಮೀನುಗಾರರಿಗೆ ಈ ಕಾಯ್ದೆಯಿಂದ ರಿಯಾಯಿತಿ ತೋರುವಂತೆ ಕೇಂದ್ರ ಸರಕಾರಕ್ಕೆ ಕೋರಲು ಕೂಡ ಈವರದಿ ಅನುಕೂಲವಾಗಲಿದೆ ಎಂಬ ಮಾಹಿತಿ ದಕ್ಷಿಣ ಫೌಂಡೇಶನ್‌ನ ಇನ್ನೊಬ್ಬ ಪ್ರತಿನಿಧಿ ಮೇರಿ ತಿಳಿಸಿದರು. ಬಡ ಸಾಂಪ್ರದಾಯಿಕ ಮೀನುಗಾರರ ಧ್ವನಿಯಾಗಿ ರಾಷ್ಟ್ರೀಯ ಮೀನುಗಾರರ ಫೆಡರೇಶನ್ ಈಗ ಮುಂದಾಗಿದೆ. ಸಾಂಪ್ರದಾಯಿಕವಾಗಿ ಸುಪ್ರೀಮ್‌ಕೋರ್ಟ್ ಮಾನ್ಯ ಮಾಡಿದ ಹಕ್ಕುಗಳರಕ್ಷಣೆಗಾಗಿ ಹೋರಾಡಲು ಮುಂದಡಿ ಇಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News