‘ಯೋಜನೆಗಳು ಕಾರ್ಯರೂಪಗೊಂಡರೆ ಅಭಿವೃದ್ಧಿ ಸಾಧ್: ಶಾಸಕ ಮಧುಬಂಗಾರಪ್ಪ
ಸೊರಬ,ಎ.25: ಸರಕಾರ ಅಭಿವೃದ್ಧಿಯ ದೃಷ್ಟಿಯಲ್ಲಿ ನೂತನ ಯೋಜನೆಗಳನ್ನು ರೂಪಿಸಿದರೆ ಸಾಲದು, ಯೋಜನೆಗಳು ಕಾರ್ಯರೂಪಗೊಳ್ಳಲು ಸಕಾಲದಲ್ಲಿ ಅನುದಾನಗಳನ್ನು ಬಿಡುಗಡೆ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಮಧುಬಂಗಾರಪ್ಪ ಹೇಳಿದ್ದಾರೆ. ತಾಲೂಕಿನ ಕೊಡಕಣಿ ಗ್ರಾಪಂ ಆವರಣದಲ್ಲಿ ನಮ್ಮ ಗ್ರಾಮ-ನಮ್ಮ ಯೋಜನೆ ಮುನ್ನೋಟ ತಯಾರಿಸುವ ಬಗ್ಗೆ ಏರ್ಪಡಿದ್ದ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆಯನ್ನು ರೂಪಿಸುವುದರ ಜೊತೆಗೆ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡದಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಗ್ರಾಪಂ ಗಳಿಗೆ ಹೆಚ್ಚು ಅಧಿಕಾರವನ್ನು ನೀಡಿದಂತೆ, ಹೆಚ್ಚಿನ ಹಣಕಾಸಿನ ನೆರವನ್ನು ಸಹ ನೀಡಬೇಕು. ಸ್ಮಾರ್ಟ್ ಸಿಟಿಯಂತೆ ಸ್ಮಾರ್ಟ್ ವಿಲೇಜ್ ಯೋಜನೆಯನ್ನು ರೂಪಿಸುವಲ್ಲಿ ಸರಕಾರ ಚಿಂತನೆ ನಡೆಸಬೇಕು, ಒಂದು ನಗರವನ್ನು ಅಭಿವೃದ್ಧಿ ಪಡಿಸುವ ಬದಲಿಗೆ 100 ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದರೆ ರಾಜ್ಯ ಏಳಿಗೆ ಹೊಂದಲು ಸಾಧ್ಯ. ಕೊಡಕಣಿ ಗ್ರಾಮಕ್ಕೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಒಂದು ಕಿ.ಮೀ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ನಾಗರತ್ನಾ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೀಮಾ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಗಣಪತಿ, ಶ್ರೀಪಾದ ನಿಸರಾಣಿ, ಗ್ರಾಪಂ ಸದಸ್ಯ ಹೂವಪ್ಪ, ಕಾರ್ಯದರ್ಶಿ ರವಿಚಂದ್ರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಣಪತಿ, ಆಶಾ ಲೋಬೋ, ನೆಹರೂ, ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.