‘ಜನತೆಯ ಆಶೀರ್ವಾದದಿಂದ ತಾನು ಸಿಎಂ ಆಗಿದ್ದೇನೆ’
ಪೂಜಾರಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು/ ಬೆಳಗಾವಿ, ಎ. 25: ತಾನು ರಾಜ್ಯದ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆಯೇ ಹೊರತು ಲೋಕಾಯುಕ್ತ ಸಂಸ್ಥೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಲೋಕಾಯುಕ್ತ ಸಂಸ್ಥೆಯಿಂದ ಸಿಎಂ ಆಗಿದ್ದೀರಿ’ ಎಂಬ ಕಾಂಗ್ರೆಸ್ಸಿನ ಹಿರಿಯ ಮುಖಂಡ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಬರ ಪೀಡಿತ ಪ್ರದೇಶಗಳ ಪ್ರಗತಿ ಪರಿಶೀಲನೆಗಾಗಿ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರಿಂದ ಸಿಎಂ ಆಗುತ್ತಾರೆಯೇ ಹೊರತು ಲೋಕಾಯುಕ್ತದಂತಹ ಶಾಸನ ಬದ್ಧ ಸಂಸ್ಥೆಗಳಿಂದ ಅಲ್ಲ ಎಂದು ತಿರುಗೇಟು ನೀಡಿದರು.
ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಲಾಗಿದೆ ಎಂದು ಎಂಬುದು ಸತ್ಯಕ್ಕೆ ದೂರ ಎಂದ ಅವರು, ರಾಜ್ಯದಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಾ ಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಕೆಲಸ ಮಾಡಲಿವೆ ಎಂದರು.ಸಾಂಬ್ರಾ ವಿಮಾನ ನಿಲ್ದಾಣದಿಂದ ಸಚಿವ ಸತೀಶ್ ಜಾರಕಿಹೊಳಿ, ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ, ಬರ ಪೀಡಿತ ಅಂಬೇವಾಡಿ, ನರಸಿಂಗಪುರ, ಹುಲ್ಲೋಳಿ ಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
‘ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗೆ ನಿಯಮಗಳನ್ನು ಉಲ್ಲಂಘಿಸಿ ಜಾಗ ನೀಡಿಲ್ಲ. ಕಾನೂನಿನ ಅನ್ವಯ ಸ್ಥಳಾವಕಾಶ ಕಲ್ಪಿಸಿದ್ದು, ಯಾವುದೇ ನಿಯಮ ಉಲ್ಲಂಘಿಸಿಲ್ಲ’
-ಸಿದ್ದರಾಮಯ್ಯ ಮುಖ್ಯಮಂತ್ರಿ