ಭ್ರಷ್ಟರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣೆ: ಶೆಟ್ಟರ್
ಬೆಂಗಳೂರು, ಎ. 25: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಾಮಾಣಿಕ ಅಧಿಕಾರಿಗಳಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದು ಭ್ರಷ್ಟರಿಗೆ ರಕ್ಷಣೆಗೆ ನೀಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎ ಅಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ವಿಜಯಭಾಸ್ಕರ್ ಅವರನ್ನು ವರ್ಗಾವಣೆ ಮಾಡಿರುವುದರಲ್ಲಿ ಸಿಎಂ ಕೈವಾಡವಿದೆ ಎಂದು ದೂರಿದರು.
ಸಿಬಿಐ ತನಿಖೆಗೆ ಆಗ್ರಹ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಬದಲಿ ನಿವೇಶನದ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಅವ್ಯವಹಾರ ನಡೆದಿದ್ದು, ಈ ಸಂಬಂಧ ಸಿಬಿಐ ತನಿಖೆ ಆಗಬೇಕು. ಆಯುಕ್ತ ಶ್ಯಾಮ್‌ಭಟ್ ಸೇರಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಶೆಟ್ಟರ್ ಇದೇ ವೇಳೆ ಆಗ್ರಹಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಬಿಡಿಎ ಆಯುಕ್ತರಿಗೆ ಪತ್ರ ಬರೆದು ಬದಲಿ ನಿವೇಶನ ಹಂಚಿಕೆ ರದ್ದುಗೊಳಿಸಿ ಹಾಗೂ ನಿವೃತ್ತ ಅಧಿಕಾರಿ ಶಶಿಧರ್ ವರದಿಯನ್ನು ಅನುಷ್ಠಾನಕ್ಕೆ ಸೂಚನೆ ನೀಡಿದ್ದರೂ, ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂದು ಅವರು, ಅವ್ಯವಹಾರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಬದಲಿ ನಿವೇಶನ, ಸಿಎಂ ಪುತ್ರನ ಆಪ್ತನ ಶಾಂತಾ ಇಂಡಸ್ಟ್ರೀಸ್‌ಗೆ ಅಕ್ರಮವಾಗಿ ಭೂಮಿ ಮಂಜೂರು ಸೇರಿದಂತೆ ಬಿಡಿಎನಲ್ಲಿನ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಆಗಲೇಬೇಕು ಎಂದ ಅವರು, ಮೆಟ್ರೋ ಪಾಲಿಟಿನ್ ಹೌಸಿಂಗ್ ಸೊಸೈಟಿ ಹೆಸರಿನಲ್ಲಿ ಜಮೀನು ಮಂಜೂರು ಮಾಡಿಸಿಕೊಂಡಿರುವ ಬಗ್ಗೆಯೂ ತನಿಖೆ ಆಗಬೇಕು ಎಂದರು.
ಯಥಾ ಸಿಎಂ ತಥಾ ಮಂತ್ರಿ: ಕಾನೂನು ಉಲ್ಲಂಘಿಸಿ ಸಮಾಜ ಕಲ್ಯಾಣ ಸಚಿವ ಆಂಜನೇಯ, ಶಿಕ್ಷಣ ಇಲಾಖೆಯ ಇಪ್ಪತ್ತೈದು ಮಂದಿ ಸಿಬ್ಬಂದಿಗಳ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಿಲೀನಗೊಳಿಸಲು ಮುಂದಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂದು ಶೆಟ್ಟರ್ ಆರೋಪಿಸಿದರು.