×
Ad

ಬೆಂಗಳೂರಿನಲ್ಲಿ ಧಾರಾಕಾರ ಮಳೆ

Update: 2016-04-25 23:40 IST

ಬೆಂಗಳೂರು, ಎ.25: ಸಿಲಿಕಾನ್‌ಸಿಟಿಯ ಜನರು ಹಲವು ದಿನಗಳಿಂದ ಬಿಸಿಲಿನ ಹೊಡೆತ ತಾಳಲಾರದೆ ನೆರಳಿನ ಆಶ್ರಯ ಪಡೆಯಲಿಕ್ಕೆ ಛತ್ರಿಗಳ ಮೊರೆ ಹಾಗೂ ತಂಪು ಪಾನೀಯಗಳ ಮೊರೆ ಹೋದ ಬೆನ್ನಲ್ಲೇ ಸಂಜೆ ನಾಲ್ಕು ಗಂಟೆಯ ಸುಮಾರಿನಲ್ಲಿ ಧಾರಾಕಾರ ಮಳೆ ಸುರಿದು ಸಿಲಿಕಾನ್‌ಸಿಟಿಯ ಜನರನ್ನು ತಂಪಾಗಿಸಿತು. ನಗರದ ಮೆಜೆಸ್ಟಿಕ್ ಸುತ್ತಮುತ್ತ, ಶಿವಾಜಿನಗರ, ಶಾಂತಿನಗರ, ಕೆ.ಎಚ್.ರಸ್ತೆ, ಅರಮನೆ ರಸ್ತೆ, ಮಡಿ ವಾಳ, ಯಶವಂತಪುರ, ರೆಸಿಡೆನ್ಸಿ ರಸ್ತೆ, ಮಲ್ಲೇಶ್ವರಂ, ಎಂ.ಜಿ.ರಸ್ತೆ, ಜಯನಗರ, ವಿಜಯನಗರ, ಸಿದ್ದಾಪುರ, ಸುಂಕದಕಟ್ಟೆ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಬಿಸಿಲಿನ ಹೊಡೆತಕ್ಕೆ ನಲುಗಿದ್ದ ಜನರು ನಿರೀಕ್ಷಿಸದ ಮಳೆ ಬಂದಿದ್ದರಿಂದ ಸಂತಸಗೊಂಡರು. ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಬೆಂಗಳೂರಿನ ತಾಪಮಾನ ಗರಿಷ್ಠ 34 ರಿಂದ 36 ಡಿಗ್ರಿ ಸೆಲ್ಸಿಯಸ್ ಇದೆ ಎಂದು ಹೇಳಿದ್ದರು. ಆದರೆ, ಸೋಮವಾರವೂ ಬೆಳಗ್ಗೆ 8 ರಿಂದಲೇ ಈ ತಾಪಮಾನ ಮುಂದುವರೆದಿತ್ತು. ಆದರೆ, ಸಂಜೆ 4 ಗಂಟೆಯ ಹೊತ್ತಿಗೆ ಮಳೆರಾಯನ ಆಗಮನವಾಗಿದ್ದರಿಂದ ಬೆಂಗಳೂರಿನ ಜನರು ಸಂಭ್ರಮಿಸಿದರು. ಆದರೆ, ಒಂದು ತಾಸು ಸತತವಾಗಿ ಸುರಿದ ಮಳೆ ದಿಢೀರ್ ಆಗಿ ನಿಂತಿದ್ದರಿಂದ ಗಾಳಿ ಕಡಿಮೆಯಾಗಿ ಸೆಕೆ ಹೆಚ್ಚಾದರೂ ಜನರು ಅಂತು ಇಂತು ಬಿರು ಬಿಸಿಲಿನಲ್ಲೂ ಮಳೆ ಬಂತಲ್ಲ ಎಂದು ಖುಷಿಪಟ್ಟರು. ನಗರದಲ್ಲಿ ದಿಢೀರ್ ಮಳೆ ಸುರಿದಿದ್ದರಿಂದ ಕೆಲವು ಕಡೆಗಳಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಜನರು ಆಫೀಸ್‌ಗಳಿಂದ ಮನೆಗಳಿಗೆ ತೆರಳಲು ಸ್ವಲ್ವಮಟ್ಟಿಗೆ ಪರದಾಡಿದರೂ ಮಳೆ ಬಂದ ಖುಷಿಯಲ್ಲಿ ಅವರು ಸಂಚಾರ ದಟ್ಟಣೆಯನ್ನು ಗಮನಿಸದೆ ಮನೆ ಕಡೆಗೆ ತೆರಳುವ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News