ನಗರದಲ್ಲಿಂದು ಗರಿಷ್ಠ ತಾಪಮಾನ ದಾಖಲು
ಬೆಂಗಳೂರು, ಎ.25: ನಗರದಲ್ಲಿ ಇಂದು 39.2 ಡಿಗ್ರಿ ಗರಿಷ್ಠ ಬಿಸಿಲಿನ ತಾಪಮಾನವಿದ್ದು, ದಾಖಲೆ ಬರೆದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನ ಈ ಗರಿಷ್ಠ ಬಿಸಿಲಿನ ತಾಪಮಾನ 148 ವರ್ಷಗಳ ದಾಖಲೆಯನ್ನು ಮುರಿದಿದ್ದು, 1931 ರಲ್ಲಿ 38.1 ರಷ್ಟು ಬಿಸಿಲಿನ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ. ಉಷ್ಣಾಂಶ ಹೆಚ್ಚಳಕ್ಕೆ ಮಾಲಿನ್ಯವೇ ಕಾರಣ. ವಾಹನಗಳು ಬಿಡುವ ಹೊಗೆ, ಡಾಂಬರೀಕರಣ, ಕೆರೆ, ಹಳ್ಳಗಳಿಲ್ಲದೆ ಇರುವುದು ತಾಪಮಾನ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ರಾಜ್ಯದ ಮೂರು ಜಿಲ್ಲೆಗಳಾದ ಮೈಸೂರು 39.9, ಚಿತ್ರದುರ್ಗ 44, ಹಾಗೂ ಮಂಡ್ಯ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಮೇ ತಿಂಗಳು ಕೂಡ ಬಿಸಿಲು ಮುಂದುವರಿಯಲಿದೆ. ಕಲಬುರ್ಗಿಯಲ್ಲಿ ನಿನ್ನೆ 31.1, ರಾಯಚೂರು 43 ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ಮಳೆ ಆದರೆ ಉಷ್ಣಾಂಶ ಕಡಿಮೆ ಆಗಲಿದೆ. ತಮಿಳುನಾಡು ಭಾಗದಿಂದ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಈ ವರ್ಷ ಮಾನ್ಸೂನ್ ಮಳೆ ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ.