ಬಿರುಬಿಸಿಲಿನ ಬೇಗೆ : ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ - ಯು.ಟಿ. ಖಾದರ್
ಬೆಂಗಳೂರು.ಏ.26: ಬಿರುಬಿಸಿಲಿನಿಂದ ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಪರಿಸ್ಥಿತಿ ನಿಭಾಯಿಸಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ಔಷಧಿಗಳನ್ನು ದಾಸ್ತಾನುಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದರು.
ಅಶುದ್ಧ ಕುಡಿಯುವ ನೀರಿನಿಂದಾಗಿ ಕಾಲರಾ, ಕರಳುಬೇನೆ, ವಾಂತಿ ಬೇಧಿ, ಅತಿಸಾರ, ಕಾಮಾಲೆ ಮುಂತಾದ ರೋಗಗಳು ಹೆಚ್ಚುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳಿಗೂ ಸಹ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಕಾಲ ಕಾಲಕ್ಕೆ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಚ ಮಾಡುವ ಮತ್ತು ಕ್ಲೋರಿನೇಷನ್ ಕೈಗೊಳ್ಳುವ ಬಗ್ಗೆಯೂ ಸೂಚಿಸಲಾಗಿದೆ. ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಜತೆಗೆ ಕುದಿಸಿ ಆರಿಸಿದ ನೀರನ್ನು ಸರಬರಾಜು ಮಾಡುವಂತೆ ಸೂಚಿಸಲಾಗಿದೆ ಎಂದರು.
ಬೇಸಿಗೆಯಲ್ಲಿ ಸೂರ್ಯಾಘಾತ [ ಸನ್ ಸ್ಟ್ರೋಕ್ ] ಸಂಭವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಕರಳುಬೇನೆ, ಕಾಲರ, ಜಾಂಡೀಸ್ ಮತ್ತಿತರ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಲ್ಲಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ರವಾನಿಸಿ ಅಂತಹ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ದಿನದ 24 ಗಂಟೆಯೂ ನಿಗಾವಣೆ ಮತ್ತು ವೈದ್ಯಕೀಯ ಸೇವಾ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಗಂಭೀರ ಸ್ವರೂಪದ ರೋಗಿಗಳನ್ನು ಆಂಬುಲೆನ್ಸ್ ಮೂಲಕ ಸಮೀಪದ ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಿಗೆ ರವಾನಿಸುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಬಿಸಿಲಿಗೆ ಹೋಗುವ ಸಂಭವ ಬಂದಲ್ಲಿ ಕೊಡೆ ಬಳಸಬೇಕು ಎಂದ ಸಚಿವರು ಸಡಿಲವಾದ ತೆಳು ಹತ್ತಿ ಬಟ್ಟೆ ಧರಿಸುವುದು, ಉಪ್ಪು, ಸಕ್ಕರೆ ಮಿಶ್ರಿತ ನೀರು ಸೇವನೆ, ಹಣ್ಣಿನ ರಸ ಕುಡಿಯುವುದು ಸೇರಿದಂತೆ ಮಸಾಲೆ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ಬೇಸಿಗೆ ಕಾಲ ಮುಗಿಯುವರೆಗೆ ವೃದ್ದರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುಸವ ಜೊತೆಗೆ ಚರ್ಮಕೆಂಪು ಬಣ್ಣ ಕಂಡುಬಂದಲ್ಲಿ, ಬೆವರಿನ ಪ್ರಮಾಣ ಕಡಿಮೆಯಾದಲ್ಲಿ, ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಹಾಗೂ ದೀರ್ಘವಾದ ಉಸಿರಾಟ ಕಂಡು ಬಂದಲ್ಲಿ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.