ಕಡೂರಿನ 60 ಗ್ರಾಪಂಗೆ ಜನರೇಟರ್, ಮೋಟಾರ್ ವ್ಯವಸ್ಥೆ: ಸಚಿವ ಡಾ. ಜಿ. ಪರಮೇಶ್ವರ್
ಕಡೂರು, ಎ.26: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ವಿದ್ಯುತ್ ಸಮಸ್ಯೆ ಇರುವುದರಿಂದ ಪ್ರತಿ ಗ್ರಾಪಂಗಳಿಗೆ ಜನರೇಟರ್ ಹಾಗೂ ಮೋಟಾರ್ ನೀಡಬೇಕಿದೆ ಈ ತಾಲೂಕಿನ 60 ಗ್ರಾಪಂ ಳಿಗೆ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಅವರು ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಬರ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಡೂರು ಕ್ಷೇತ್ರದಲ್ಲಿ ಬರಗಾಲವಿದೆ. ಆದರೆ ಭೀಕರತೆ ಇಲ್ಲ, ಆವಶ್ಯಕತೆ ಇದ್ದ ಕಡೆ ಪೈಪ್ ಲೈನ್ ಅಳವಡಿಸಬೇಕಿದೆ. ಶಾಸಕರ ಸಲಹೆ ಮೇರೆಗೆ ಜನರೇಟರ್ ಮತ್ತು ಮೋಟಾರ್‌ಗಳನ್ನು ಪ್ರತಿ ಗ್ರಾಪಂ ಗಳಿಗೆ ನೀಡುವ ಬಗ್ಗೆ ಸಂಬಂಧಿಸಿದ ಕಂದಾಯ ಇಲಾಖೆಗೆ ಆದೇಶ ಮಾಡಲಾಗುವುದು ಇದರ ಬಗ್ಗೆ ಅಂದಾಜು ಪಟ್ಟಿ ತಯಾರು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನ ಬರಗಾಲ ಪರಿಸ್ಥಿತಿ ನಿರ್ವಹಿಸಲು ಪ್ರತೀ ಗ್ರಾಪಂಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನಿರ್ವಹಣೆಯಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ನೋಡಲ್ ಅಧಿಕಾಗಳನ್ನು ನೇರ ಹೊಣೆ ಮಾಡಲಾಗುವುದು. ಕ್ಷೇತ್ರದಲ್ಲಿ ಬರ ಪರಿಸ್ಥಿತಿ ಬಗ್ಗೆ ತಿಳಿಯಲು ಕಡೂರು ತಾಲೂಕಿನಲ್ಲಿ ಹಲವೆಡೆ ಪ್ರವಾಸ ಮಾಡಿದ್ದೇನೆ. ಈಗಾಗಲೇ ಸರಕಾರ ಕುಡಿಯುವ ನೀರಿನ ನಿರ್ವಹಣೆಗಾಗಿ 50 ಲಕ್ಷ ರೂ. ಬಿಡುಗಡೆ ಮಾಡಿದೆ. ತಾಲೂಕಿನ 37 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಹೆಚ್ಚುವರಿಯಾಗಿ 99 ಲಕ್ಷ ರೂ. ಅನುದಾನವಾಗಿ ಬಿಡುಗಡೆ ಮಾಡಲಾಗಿದೆ. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಭದ್ರ ಮೇಲ್ದಂಡೆ ಜನೆ ಮತ್ತು ಎತ್ತ್ತಿನಹೊಳೆ ಯೋಜನೆಗಳು ಕಾರ್ಯಗತವಾದರೆ ಕಡೂರು ತಾಲೂಕಿಗೆ ಬಹು ಅನುಕೂಲವಾಗುವ ಬಗ್ಗೆ ಮಾಹಿತಿ ಇದೆ. ಗಂಗನಹಳ್ಳಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲದಿದ್ದರೂ ತೊಂದರೆ ಉಂಟಾದಲ್ಲಿ ಸ್ಥಳೀಯವಾಗಿಯೇ ಮೇವು ಖರೀದಿ ಮಾಡಲು ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ರಾಗಿ ಮಾರಾಟ ಮಾಡಿರುವ ರೈತರಿಗೆ ಶೀಘ್ರವೇ ಹಣ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಶಾಸಕ ವೈ.ಎಸ್.ವಿ ದತ್ತ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ನಿರ್ವಹಣೆ ಅತೀ ಮುಖ್ಯ. ಇಲ್ಲಿನ್ನೂ ಪರಿಸ್ಥಿತಿ ಭೀಕರ ಎನ್ನುವಷ್ಟು ಹದಗೆಟ್ಟಿಲ್ಲ. ಆದರೆ ಮುಂದೆ ತೊಂದರೆಯಾಗಬಹುದು ಎಂಬ ಕಾರಣದಿಂದ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಕೊಳವೆ ಬಾವಿಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಶಾಶ್ವತ ನೀರಾವರಿ ವ್ಯವಸ್ಥೆ ಅತಿ ಆವಶ್ಯಕ. ತಾಲೂಕಿನ 32 ಕೆರೆಗಳನ್ನು ತುಂಬುವ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಚಾನಲ್ ಕಾಮಗಾರಿಗೆ ಕೂಡಲೆ ಚಾಲನೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಎಂಎಲ್ಸಿ ಪ್ರಾಣೇಶ್, ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ಶರತ್ ಕೃಷ್ಣಮೂರ್ತಿ, ಕಾವೇರಿ ಲಕ್ಕಪ್ಪ, ವನಮಾಲ ದೇವರಾಜು, ಜಿಪಂ ಸಿಇಒ ಡಾ.ಆರ್, ರಾಗಪ್ರಿಯಾ, ಎಸ್ಪಿ ಸಂತೋಷ್ ಬಾಬು, ಡಿವೈಎಸ್ಪಿ ರಾಜನ್ ನಾಯಕ್, ತರೀಕೆರೆ ಉಪವಿಭಾಗಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಎಂ.ಭಾಗ್ಯ, ತೆಂಗು ಮತ್ತು ನಾರು ನಿಗಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ನಂಜಪ್ಪ, ತಾಪಂ ಇಒ ಗೋಪಾಲಕೃಷ್ಣ, ಕಡೂರು ಪುರಸಭೆ ಅಧ್ಯಕ್ಷೆ ಅನಿತಾ ರಾಜ್ ಕುಮಾರ್, ಉಪಾಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು.
ಬರಪೀಡಿತ ಪ್ರದೇಶಗಳಿಗೆ ಸಚಿವರ ಪ್ರವಾಸ: ಕಡೂರು ವಿಧಾನಸಭಾ ಕ್ಷೇತ್ರದ ಹತ್ತಾರು ಗ್ರಾಮಗಳಿಗೆ ಉಸ್ತುವಾರಿ ಸಚಿವರು ಬರಪೀಡಿತ ಪ್ರದೇಶಗಳಿಗೆ ಮಂಗಳವಾರ ಬೆಳಗ್ಗೆ ಪ್ರವಾಸ ಕೈಗೊಂಡರು. ಪ್ರಾರಂಭದಲ್ಲಿ ಹೇಮಗಿರಿ ಕ್ಷೇತ್ರದಿಂದ ಮಲ್ಲಾಘಟ್ಟ ಗ್ರಾಮದಲ್ಲಿ ರೈತರೊಂದಿಗೆ ಬರದ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಿ, ನಂತರ ಸಿಂಗಟಗೆರೆ ಗ್ರಾಮಕ್ಕೆ ಭೇಟಿ ನೀಡಿ ಬತ್ತಿಹೋಗಿರುವ ಕೆರೆಯನ್ನು ವೀಕ್ಷಿಸಿದರು.
ಸಿಂಗಟಗೆರೆ ಜಿಪಂ ವ್ಯಾಪ್ತಿಯ ಅನೇಕ ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯ, ಭದ್ರಾಮೇಲ್ದಂಡೆ ಯೋಜನೆಯಡಿ ಈ ವ್ಯಾಪ್ತಿಗೆ ನೀರನ್ನು ಪೂರೈಸಬೇಕಿದ್ದು, ಪಂಚನಹಳ್ಳಿ, ಗಂಗನಹಳ್ಳಿ ಮತ್ತು ಗರುಗದಹಳ್ಳಿ ಗ್ರಾಮದ ಕೆರೆಗಳಿಗೂ ನೀರಿನ ಸೌಕರ್ಯ ಕಲ್ಪಿಸಬೇಕಿದೆ, ತುರ್ತಾಗಿ ಮೇವು ಕೇಂದ್ರ ಸ್ಥಾಪಿಸಬೇಕಿದೆ ಎಂದು ಸಿಂಗಟಗೆರೆ ಕ್ಷೇತ್ರದ ಜಿಪಂ ಸದಸ್ಯ ಕೆ.ಆರ್.ಮಹೇಶ್‌ಒಡೆಯರ್ ಸಚಿವರಿಗೆ ಮನವಿ ಸಲ್ಲಿಸಿದರು.